ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ಆಟವನ್ನು ಲೈವ್ ಆಗಿ ನೋಡಬೇಕೆನ್ನುವುದು ಅವರ ಅಭಿಮಾನಿಗಳ ಮನದಾಸೆಯಾಗಿರುತ್ತದೆ. ಆಟ ಮಾತ್ರವಲ್ಲ ಅವರನ್ನು ಭೇಟಿಯಾಗುವುದು ಅಥವಾ ಹಸ್ತಲಾಘವ ಮಾಡಲು, ಸೆಲ್ಫಿ ಕ್ಲಿಕ್ಕಿಸಲು ಸಿಕ್ಕರಂತೂ ಸ್ವರ್ಗಕ್ಕೆ ಮೂರೇ ಗೇಣು. ಒಂದು ವೇಳೆ ಮೆಸ್ಸಿ ನಿಮ್ಮ ಕಣ್ಮುಂದೆ ನಿಂತರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
ಅನೇಕರು ಮೂಕವಿಸ್ಮಿತರಾಗುತ್ತಾರೆ ಅಥವಾ ನಿಶ್ಚೇಷ್ಟಿತರಾಗಿರಬಹುದು. ಇನ್ನು ಕೆಲವರು ಖುಷಿಯಿಂದ ಆನಂದಭಾಷ್ಪ ಸುರಿಸಬಹುದು. ಇಲ್ಲಿ ನಡೆದದ್ದು ಅದೇ. ಮಂಗಳವಾರ ರಾತ್ರಿ ಲೀಗ್ ಕಪ್‌ನಲ್ಲಿ ಅಟ್ಲಾಂಟಾ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಇಂಟರ್ ಮಿಯಾಮಿಗೆ ಮೆಸ್ಸಿ ಪಂದ್ಯ ಆಡುವ ಮುನ್ನ ಈ ಘಳಿಗೆಗೆ ಸಾಕ್ಷಿಯಾಯಿತು.
ಡಿಜೆ ಖಲೀದ್ ಅವರ ಮಗ ಮೆಸ್ಸಿಯೊಂದಿಗೆ ಮೈದಾನಕ್ಕೆ ಹೊರನಡೆದ. ಈ ವೇಳೆ ಬಾಲಕ ಮೆಸ್ಸಿ ಮುಂದೆ ನಿಂತಾಗ ಆತ ಇದ್ದಕ್ಕಿದ್ದಂತೆ ಅಳಲು ಶುರು ಮಾಡಿದ್ದಾನೆ. ಮೆಸ್ಸಿ ಅಳುತ್ತಿರುವ ಬಾಲಕನನ್ನು ಗಮನಿಸಿ ತಕ್ಷಣವೇ ಅವನ ಭುಜದ ಮೇಲೆ ಕೈಯಿಟ್ಟು ಅವನಿಗೆ ಸಾಂತ್ವನ ಹೇಳಿದ್ರು. ಖಲೀದ್, ಆಟಗಾರರು ನಿಂತಿರುವ ಸ್ಟ್ಯಾಂಡ್‌ನಿಂದ ತನ್ನ ಮೊಬೈಲ್ ಫೋನ್‌ನಲ್ಲಿ ಈ ಕ್ಷಣವನ್ನು ಚಿತ್ರೀಕರಿಸಿದರು.
ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರೂ ಮೆಸ್ಸಿ ಅವರ ಕಾಳಜಿಯುಳ್ಳ ನಡೆ ಮತ್ತು ನಮ್ರತೆಗಾಗಿ ಶ್ಲಾಘಿಸಿದ್ದಾರೆ.
ಅಂದಹಾಗೆ, ಲೀಗ್ ಕಪ್ ನಾಕೌಟ್‌ಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇಂಟರ್ ಮಿಯಾಮಿಯನ್ನು ಅಟ್ಲಾಂಟಾ ವಿರುದ್ಧ 4-0 ಅಂತರದಲ್ಲಿ ಭರ್ಜರಿ ಜಯಗಳಿಸುವ ಮೂಲಕ ಮೆಸ್ಸಿ ಪರಾಕ್ರಮ ಮೆರೆದಿದ್ದಾರೆ.