ಒಂದರ ಹಿಂದೆ ಒಂದು ಹಬ್ಬಗಳು ಬರುತ್ತಿದ್ದರೆ, ನಮ್ಮೆಲ್ಲರ ದೈನಂದಿನ ಆಹಾರದಲ್ಲಿಯೂ ಸಕ್ಕರೆಯ ಪ್ರಮಾಣ ಜಾಸ್ತಿಯಾಗುತ್ತದೆ. ದೀಪಾವಳಿ ಹಬ್ಬದಲ್ಲಂತೂ ಎಲ್ಲರ ಮನೆಯಲ್ಲಿ ಸಿಹಿ ತಿಂಡಿಗಳದ್ದೇ ಕಾರುಬಾರು. ಮನೆಗೆ ಬರುವ ಪ್ರತಿಯೊಬ್ಬ ಅತಿಥಿಯೂ ಸಿಹಿ ಪೊಟ್ಟಣದೊಂದಿಗೇ ಪ್ರವೇಶ ಮಾಡುತ್ತಾರೆ. ಆದರೆ ಆ ಎಲ್ಲ ಸಕ್ಕರೆಯ ಸಿಹಿ ತಿನಿಸುಗಳ ಸೇವನೆಯ ಬಗ್ಗೆ ಸ್ಪಲ್ಪ ಜಾಗರೂಕರಾಗಿದ್ದರೆ ಒಳ್ಳೆಯದು.
ಸಕ್ಕರೆ ನಮ್ಮೆಲ್ಲರ ದೈನಂದಿನ ಆಹಾರದಲ್ಲಿ ಅತೀ ಪ್ರಾಮುಖ್ಯತೆಯನ್ನ ಪಡೆದುಕೊಂಡಿರುವ ಪದಾರ್ಥ. ಇದು ವೈಜ್ಞಾನಿಕವಾಗಿ ಮೊನೊಸ್ಯಾಕರೈಡ್ ಎಂದು ಕರೆಯಲ್ಪಡುವ ಕಾರ್ಬೋಹೈಡ್ರೇಟ್ಗಳ ಮೂಲ ಘಟಕವಾಗಿದೆ. ಸಕ್ಕರೆಯ ಮೂಲ ರೂಪ ಬಿಳಿಯ ಬಣ್ಣ ಅಲ್ಲವೇ ಅಲ್ಲ. ಗ್ಲುಕೋಸ್, ಫ್ರಕ್ಟೋಸ್ ಮತ್ತು ಗ್ಯಾಲಕ್ಟೋಸ್ನ ಗಳನ್ನ ಹೊಂದಿರುವ ಈ ಸಕ್ಕರೆಯನ್ನ ದೈನಂದಿನ ಆಹಾರದಲ್ಲಿ ಬಳಸುವುದರಿಂದಾಗುವ ಐದು ಪ್ರಮುಖ ತೊಂದರೆಗಳನ್ನ ಇಲ್ಲಿ ಹೇಳಿದ್ದೇವೆ ನೋಡಿ.
ಬೊಜ್ಜು ಅಥವಾ ಸ್ಥೂಲಕಾಯದ ತೊಂದರೆಗಳಿಗೆ ಪ್ರಮುಖ ಕಾರಣ ಸಕ್ಕರೆ. ಸಕ್ಕರೆಯಲ್ಲಿರುವ ಫ್ರಕ್ಟೋಸ್ ಸುಲಭವಾಗಿ ದೇಹದಲ್ಲಿ ಕೊಬ್ಬಾಗಿ ಪರಿವರ್ತಿತಗೊಳ್ಳುತ್ತದೆ. ಹೆಚ್ಚು ಸಕ್ಕರೆ ಸೇವಿಸುವುದರಿಂದ ಯಕೃತ್ತಿನ ಮೇಲೆ ಹೆಚ್ಚು ಒತ್ತಡ ಬಿದ್ದು, ಸಕ್ಕರೆಯಲ್ಲಿರುವ ಫ್ರಕ್ಟೋಸ್ ಅಂಶವನ್ನು ಕೊಬ್ಬುಗಳಾಗಿ ಪರಿವರ್ತಿಸುತ್ತದೆ. ಹೆಚ್ಚು ಪ್ರಮಾಣದ ಸಕ್ಕರೆಯು ನೇರವಾಗಿ ಕೊಬ್ಬು ಆಗಿ ಮಾರ್ಪಡುವ ಕಾರಣ ದೇಹದಲ್ಲಿ ಬೊಜ್ಜು ಹೆಚ್ಚುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳಿಗೆ ಸಕ್ಕರೆ ಆಹ್ವಾನ ನೀಡುತ್ತದೆ
ದಿನವಿಡೀ ಹೆಚ್ಚು ಸಕ್ಕರೆಯುಕ್ತ ಆಹಾರವನ್ನ , ಪಾನೀಯಗಳನ್ನ ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟದಲ್ಲಿ ಹೆಚ್ಚಳವಾಗಿ, ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ರಕ್ತದ ಪ್ರವಾಹದಲ್ಲಿನ ಸಕ್ಕರೆಯ ಪ್ರಮಾಣವು ರಕ್ತದೊತ್ತಡಕ್ಕೆ ಕಾರಣವಾಗಬಹುದು. ರಕ್ತದೊತ್ತಡ ಹೃದಯದ ಆರೋಗ್ಯಕ್ಕೆ ಹಾನಿಕರ. ಹೀಗಾಗಿ, ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ಹೃದಯದ ತೊಂದರೆಗಳು ಹೆಚ್ಚುತ್ತಿರುವುದಕ್ಕೂ ಸಕ್ಕರೆಯ ಅತಿಯಾದ ಸೇವನೆಯೂ ಕಾರಣ ಎಂದು ತಿಳಿದುಬಂದಿದೆ.
ರೋಗ ನಿರೋಧಕ ಶಕ್ತಿಯನ್ನ ಕುಂದಿಸುತ್ತದೆ ಸಕ್ಕರೆ. ಸಕ್ಕರೆ ಸೇವನೆಯಿಂದಾಗಿ, ಸೋಂಕು ಮತ್ತು ಸಾಮಾನ್ಯ ಶೀತ, ನೆಗಡಿ ಇಂಥ ಕಾಯಿಲೆಗಳನ್ನೂ ಎದುರಿಸುವ ಶಕ್ತಿ ನಾಶವಾಗಲು ಪ್ರಾರಂಭವಾಗುತ್ತದೆ. ಏಕೆಂದರೆ ಅಪಾಯಕಾರಿ ಬ್ಯಾಕ್ಟೀರಿಯಾಗಳ ದಾಳಿಯನ್ನ ತಡೆಯುವ ಕೆಲಸ ಮಾಡುವ ಬಿಳಿ ರಕ್ತ ಕಣಗಳ ಶಕ್ತಿಯನ್ನೇ ಸಕ್ಕರೆ ಕುಂದಿಸುತ್ತದೆ. ಹೀಗಾಗಿ, ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಬೇಕು ಎಂದರೆ ಸಕ್ಕರೆಯನ್ನ ತ್ಯಜಿಸಲೇಬೇಕು.
ಸಕ್ಕರೆಯು ಚರ್ಮದ ಆರೋಗ್ಯಕ್ಕೂ ಹಾನಿಕರ..!
ದೇಹದಲ್ಲಿನ ಸಕ್ಕರೆ ಅಂಶವು ಚರ್ಮದ ಕೋಶಗಳನ್ನು ಆಕ್ರಮಿಸಿ, ಚರ್ಮವನ್ನು ದುರ್ಬಲವಾಗಿಸಬಲ್ಲದು. ಇಂಥ ದುರ್ಬಲ ಚರ್ಮವು ಅತೀ ಸೂಕ್ಷ್ಮವಾಗಿ ಪರಿಣಮಿಸಿ, ಬಿಸಿಲು, ಹವಾಮಾನ ವೈಪರೀತ್ಯಕ್ಕೂ ಕೂಡ ಚರ್ಮದ ಆರೋಗ್ಯ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಸಕ್ಕರೆಯನ್ನ ಅತಿಯಾಗಿ ಸೇವಿಸುವುದರಿಂದ ಚರ್ಮದ ತೊಂದರೆಗಳಾದ ಗುಳ್ಳೆ, ಮೊಡವೆ, ನವೆಯಂಥ ತೊಂದರೆಗಳು ಕಾಣಿಸಿಕೊಳ್ಳಬಹುದು.
ಸಕ್ಕರೆ ಕೂಡ ಒಂದು ವ್ಯಸನವಾಗಿ ಪರಿಣಮಿಸಬಲ್ಲದು. ಸಕ್ಕರೆಯನ್ನ ಅತಿಯಾಗಿ ತಿನ್ನುವ, ಸಿಹಿಯನ್ನ ಅತಿಯಾಗಿ ಇಷ್ಟಪಡುವ ಮಂದಿ ಅದನ್ನ ಬಿಟ್ಟಿರಲು ಸಾಧ್ಯವೇ ಇಲ್ಲದಂಥ ಮನಃಸ್ಥಿತಿಯಲ್ಲಿರುತ್ತಾರೆ. ಸಕ್ಕರೆಯ ಬಳಕೆಯನ್ನ ಬಿಟ್ಟುಬಿಡಿ ಎಂದರೆ ಅದು ಅಸಾಧ್ಯದ ಮಾತು ಎನ್ನುತ್ತಾರೆ. ಇದಕ್ಕೇ ವ್ಯಸನ ಎಂದು ಕರೆಯುವುದು. ಸಕ್ಕರೆಯ ಅತಿಯಾದ ಸೇವನೆ ಕೂಡ ತಂಬಾಕು ಸೇವನೆಯಷ್ಟೇ ಅಪಾಯಕಾರಿ ಎಂಬುದನ್ನು ಮರೆಯಲೇಬಾರದು.