ಹಿರಿಯ ನಟಿ ಲೀಲಾವತಿ ನಿಧನರಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗ, ರಾಜಕೀಯ ಗಣ್ಯರು ಆಗಮಿಸಿ ನಟಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿ, ಲೀಲಾವತಿಯವರ ಪುತ್ರ ವಿನೋದ್ ರಾಜ್ ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗಿ, ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಕಲ ಸರ್ಕಾರಿ ಗೌರವಗಳೊಂದಿಗೆ ಲೀಲಾವತಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದರು.ಲೀಲಾವತಿ ಅವರು ಎಷ್ಟೇ ಕಷ್ಟದಲ್ಲಿದ್ದರೂ ಸರ್ಕಾರದ ಸಹಾಯ ಕೇಳಿರಲಿಲ್ಲ. ನಮ್ಮ ಕಾಲದಲ್ಲಿ ಡಾ ರಾಜ್ ಕುಮಾರ್ ಹಾಗೂ ಲೀಲಾವತಿ ಜೋಡಿ ಬಹಳ ಜನಪ್ರಿಯವಾಗಿತ್ತು, ನಾನು ವಿದ್ಯಾರ್ಥಿಯಾಗಿದ್ದಾಗ ಅವರ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೆ, ಅದರಲ್ಲಿ ಕುಲವಧು ಸಿನಿಮಾ ನನಗೆ ಇಷ್ಟವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.