ಮೈಸೂರು: ಇಲ್ಲೋರ್ವ ವ್ಯಕ್ತಿ ಬಸ್ಸು, ಕಾರು, ರೈಲು, ವಿಮಾನವನ್ನೂ ಹತ್ತದೇ ಕೇವಲ ಲಿಫ್ಟ್ ಕೇಳಿಕೊಂಡೇ ಬರೋಬ್ಬರಿ 14 ದೇಶಗಳನ್ನು ಸುತ್ತಿದ್ದಾರೆ. ಅಚ್ಚರಿ ಎನಿಸಿದರೂ ಇದು ನಿಜ. ಫ್ರಾನ್ಸ್ ಮೂಲದ ವ್ಯಕ್ತಿಯೊಬ್ಬರು ಲಿಫ್ಟ್ ಕೇಳಿಯೇ ಇಷ್ಟೊಂದು ದೇಶಗಳನ್ನು ಸಂಚರಿಸಿದ್ದು, ಈಗ ಮೈಸೂರಿಗೆ ಆಗಮಿಸಿದ್ದಾರೆ.
ಫ್ರಾನ್ಸ್ ಮೂಲದ 23 ವರ್ಷದ ಲುಕಾಸ್ ವೆನ್ನಾರ್ ಎಂಬಾತ ಇಂತಹ ವಿಶೇಷ ಪ್ರಯಾಣ ಆರಂಭಿಸಿದ್ದು, ಕೇವಲ ಲಿಫ್ಟ್ ಮೂಲಕವೇ 20 ಸಾವಿರ ಕಿ.ಮೀ ಪ್ರಯಾಣಿಸಿದ್ದಾರೆ.
ಫೆಬ್ರವರಿ 4ರಂದು ಫ್ರಾನ್ಸ್ ನಿಂದ ಪ್ರಯಾಣ ಆರಂಭಿಸಿರುವ ಲುಕಾಸ್, ಎಲ್ಲಿಯೂ ಟಿಕೆಟ್ ಖರೀದಿಸಿಲ್ಲ. ವಿಮಾನ, ಟ್ರೇನ್, ಬಸ್ ಹತ್ತಿಲ್ಲ. ಕೇವಲ ಲಿಫ್ಟ್ ಪಡೆದಿದ್ದಾರೆ ಅಷ್ಟೇ. ಹಡಗು, ಕಾರು, ಬೈಕ್, ಟ್ರಕ್ ಗಳಲ್ಲಿ ಲಿಫ್ಟ್ ಕೇಳಿಕೊಂಡು ಪ್ರಯಾಣಿಸಿದ್ದಾರೆ. ಫ್ರಾನ್ಸ್ ನಿಂದ ಆಫ್ರಿಕಾ, ಚೀನಾ, ಟಿಬೆಟ್, ಖಜಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶ, ಭಾರತ ಸೇರಿದಂತೆ ಒಟ್ಟು 14 ದೇಶಗಳನ್ನು ಸುತ್ತಿದ್ದಾರೆ.
ಇದೀಗ ಲುಕಾಸ್ ಮೈಸೂರುಗೆ ಆಗಮಿಸಿದ್ದು, ಮೈಸೂರು ಅರಮನೆ ನೋಡಿ ಖುಷಿಪಟ್ಟಿದ್ದಾರೆ. ಭಾರತದಲ್ಲಿ ಕಳೆದ ಎರಡು ತಿಂಗಳಿಂದ ಲಿಫ್ಟ್ ಮೂಲಕವೇ ಸಂಚಾರ ಮಾಡಿರುವುದಾಗಿ ತಿಳಿಸಿದ್ದಾರೆ. ಇದೀಗ ಮೈಸೂರು ಭೇಟಿ ಬಳಿಕ ಶ್ರೀಲಂಕಾದತ್ತ ಪ್ರಯಾಣ ಬೆಳೆಸುತ್ತಿರುವುದಾಗಿ ಲುಕಾಸ್ ಹೇಳಿದ್ದಾರೆ. ಅಲ್ಲದೇ ಸ್ವಿಟ್ಜರ್ಲೆಂಡ್ ವರೆಗೆ ಲಿಫ್ಟ್ ಮೂಲಕವೇ ಪ್ರವಾಸ ಕೈಗೊಳ್ಳುವ ಗುರಿಯನ್ನು ಇವರು ಹೊಂದಿದ್ದಾರಂತೆ.