ಕನ್ಯತ್ವದ ಬಗ್ಗೆ ನಮ್ಮ ಸಮಾಜದಲ್ಲಿ ಹಲವು ನಂಬಿಕೆಗಳಿವೆ. ಅದೇ ಸತ್ಯವೆಂದು ಒಪ್ಪಿಕೊಂಡು ಅದನ್ನು ಅನುಸರಿಸುವವರೇ ಹೆಚ್ಚು. 21ನೇ ಶತಮಾನದಲ್ಲಿ ಬದುಕುತ್ತಿದ್ದರೂ ಅನೇಕರು ಕನ್ಯತ್ವವೆಂಬ ಭ್ರಮೆಗೆ ಒಳಗಾಗಿ ಯುವತಿಯರ ಜೀವನಕ್ಕೆ ಮುಳ್ಳಾಗುತ್ತಾರೆ. ಕನ್ಯತ್ವವನ್ನು ನಮ್ಮ ಸಮಾಜದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಗುಣಲಕ್ಷಣ ಪ್ರಮಾಣಪತ್ರ ಎಂದು ಕರೆಯಲಾಗುತ್ತದೆ.
ಕನ್ಯತ್ವದ ಕುರಿತಂತೆ ಪುರುಷ ಅಥವಾ ಮಹಿಳೆ ಎಂಬ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ನೀಡುವ ಅಗತ್ಯವಿದೆ. ಕನ್ಯಾಪೊರೆಯ ಬಗ್ಗೆ ಇನ್ನೂ ತಪ್ಪು ಕಲ್ಪನೆಗಳಿವೆ. ಯುವತಿಯರು ಯಾರೊಂದಿಗಾದರೂ ದೈಹಿಕ ಸಂಬಂಧ ಬೆಳೆಸಿದರೆ ಕನ್ಯಾಪೊರೆ ಹರಿದು ಹೋಗುತ್ತದೆ ಎಂಬುದು ಅನೇಕರ ಭ್ರಮೆ. ಈ ಮೂಲಕವೇ ವಿವಿಧ ಪ್ರದೇಶಗಳಲ್ಲಿ ಹುಡುಗಿ ಕನ್ಯೆಯೋ ಅಲ್ಲವೋ ಎಂಬ ಪರೀಕ್ಷೆಯನ್ನೂ ಮಾಡಲಾಗುತ್ತದೆ. ಕನ್ಯಾಪೊರೆ ಒಡೆದ ನಂತರ ರಕ್ತಸ್ರಾವವಾಗುತ್ತದೆ ಎಂದೂ ಹೇಳಲಾಗುತ್ತದೆ.
ಆದರೆ ಕನ್ಯಾಪೊರೆ ಕುರಿತಾದ ಈ ವಿಷಯ ಸಂಪೂರ್ಣವಾಗಿ ಸುಳ್ಳು. ಒಳಭಾಗದಲ್ಲಿರುವ ಈ ಪೊರೆ ವ್ಯಾಯಾಮ ಮತ್ತು ಆಟದಿಂದ ಕೂಡ ಹರಿದು ಹೋಗಬಹುದು. ಕೇವಲ ಲೈಂಗಿಕ ಕ್ರಿಯೆಯಿಂದ ಕನ್ಯಾಪೊರೆ ಹರಿಯುವುದಿಲ್ಲ. ಇದು ಕನ್ಯತ್ವದ ಸಂಕೇತವೂ ಅಲ್ಲ. ಇದು ಸಾಕಷ್ಟು ಮೃದು ಮತ್ತು ಸೂಕ್ಷ್ಮವಾಗಿದ್ದು ತೀವ್ರವಾದ ದೈಹಿಕ ಚಟುವಟಿಕೆಯಿಂದಲೂ ಹರಿದು ಹೋಗಬಹುದು. ಕನ್ಯಾಪೊರೆ ಹರಿಯುವಿಕೆಯನ್ನು ಕನ್ಯತ್ವ ಪರೀಕ್ಷೆಯಾಗಿ ಬಳಕೆ ಮಾಡುವುದು ಸರಿಯಲ್ಲ. ಏಕೆಂದರೆ ಇದು ಎಂದಿಗೂ ಶಾಶ್ವತವಾಗಿ ಕಣ್ಮರೆಯಾಗುವುದಿಲ್ಲ. ಯಾವಾಗಲೂ ದೇಹದಲ್ಲಿ ಉಳಿಯುತ್ತದೆ.