ದೇಶದ ಸರ್ಕಾರಿ ಜೀವ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಷೇರುದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಎಲ್ ಐಸಿ ತನ್ನ ಷೇರುದಾರರಿಗೆ ತಮ್ಮ ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಸಾಧ್ಯವಾದಷ್ಟು ಬೇಗ ನವೀಕರಿಸಲು ಹೇಳಿದೆ. ಎಲ್‌ಐಸಿ ಪತ್ರಿಕೆಯ ಜಾಹೀರಾತಿನಲ್ಲಿ ಈ ಮಾಹಿತಿ ನೀಡಿದೆ.
ಎಲ್‌ಐಸಿ, ಮೇ 27, 2024 ರಂದು ನಿಗಮದ ನಿರ್ದೇಶಕರ ಮಂಡಳಿಯ ಸಭೆ ನಡೆಸಿದೆ. ಸಭೆಯಲ್ಲಿ 10 ರೂಪಾಯಿ ಮುಖಬೆಲೆಯ ಪ್ರತಿ ಇಕ್ವಿಟಿ ಷೇರಿಗೆ 6 ರೂಪಾಯಿ ಲಾಭಾಂಶ ನೀಡಲು ನಿರ್ಧರಿಸಿದೆ. 2023-24 ರ ಆರ್ಥಿಕ ವರ್ಷಕ್ಕೆ ಶಿಫಾರಸು ಮಾಡಿದೆ, ಇದನ್ನು ಆಗಸ್ಟ್ 22 , 2024 ರಂದು ನಡೆಯಲಿರುವ ಮೂರನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿಗಮದ ಸದಸ್ಯರು ಘೋಷಿಸಲಿದ್ದಾರೆ.
ಈಕ್ವಿಟಿ ಷೇರುಗಳನ್ನು, ಭೌತಿಕವಾಗಿ ಅಥವಾ ವಿದ್ಯುನ್ಮಾನವಾಗಿ ಹೊಂದಿರುವ ಎಲ್ಲಾ ಷೇರುದಾರರಿಗೆ ಲಾಭಾಂಶವನ್ನು ಪಾವತಿಸಲಾಗುತ್ತದೆ. ಲಾಭಾಂಶವನ್ನು ಘೋಷಿಸಿದ ದಿನಾಂಕದಿಂದ 30 ದಿನಗಳ ಒಳಗೆ ಅಥವಾ ಸೆಪ್ಟೆಂಬರ್ 20, 2024 ರೊಳಗೆ ಅರ್ಹ ಸದಸ್ಯರ ಖಾತೆಗಳಿಗೆ ಪಾವತಿಯನ್ನು ಕಳುಹಿಸಲಾಗುತ್ತದೆ.
ಆದಾಯ ತೆರಿಗೆ ಕಾಯಿದೆ 1961 ರ ಪ್ರಕಾರ, ಲಾಭಾಂಶದಿಂದ ಬರುವ ಆದಾಯವು ತೆರಿಗೆಗೆ ಒಳಪಡುತ್ತದೆ. ಟಿಡಿಎಸ್ ಅವಶ್ಯಕತೆಗಳನ್ನು ಪೂರೈಸಲು, ಎಲ್ಐಸಿ ತನ್ನ ಷೇರುದಾರರಿಗೆ ತಮ್ಮ ವಿಳಾಸ, ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಒಳಗೊಂಡಂತೆ ಎಲ್ಲಾ ಮಾಹಿತಿಯನ್ನು ಐಟಿ ಕಾಯ್ದೆಯ ಪ್ರಕಾರ ಡಿಪಿಯೊಂದಿಗೆ ನವೀಕರಿಸಲು ಮನವಿ ಮಾಡಿದೆ.