ಬೆಂಗಳೂರು: ಭಾಗ್ಯಲಕ್ಷ್ಮಿ ಯೋಜನೆ ಮತ್ತೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಭಾಗ್ಯಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಎಲ್ಐಸಿ ನೀಡಬಹುದಾದ ಕೊಡುಗೆಗಳ ಕುರಿತಾಗಿ ಸಮಾಲೋಚನೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಪ್ರೀಮಿಯಂ ಮೊತ್ತಕ್ಕೆ ಒಂದು ಲಕ್ಷ ರೂಪಾಯಿ ನೀಡಲು ಎಲ್ಐಸಿ ಅಸಹಾಯಕತೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಯೋಜನೆ ಮೂಲಕ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಲು ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಈ ಬಗ್ಗೆ ಎಲ್ಐಸಿಯ ವಲಯ ವ್ಯವಸ್ಥಾಪಕಿ ಮಿನಿ ಇಪೆ ನೇತೃತ್ವದ ಹಿರಿಯ ಅಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಎಲ್ಐಸಿ ಮೂಲಕವೇ ಯೋಜನೆ ಜಾರಿಗೊಳಿಸುವ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಬೇಕೆಂದು ಮನವಿ ಮಾಡಿದೆ.
ಈ ವೇಳೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಯಡಿಯೂರಪ್ಪ, ಭಾಗ್ಯಲಕ್ಷ್ಮೀ ಯೋಜನೆಯಡಿ ನೀಡುವ ಕೊಡುಗೆಗಳ ಕುರಿತು ಆರ್ಥಿಕ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಎಲ್ಐಸಿ ಅಧಿಕಾರಿಗಳ ನಿಯೋಗಕ್ಕೆ ತಿಳಿಸಿದ್ದು, ಪರಿಶೀಲನೆ ನಡೆಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.