ಸತ್ತವರ ಹೆಸರಲ್ಲಿ ಜೀವ ವಿಮೆ ಮಾಡಿಸಿ ಬಳಿಕ ಅವರ ಹೆಸರಿನಲ್ಲಿ 1.81 ಕೋಟಿ ರೂಪಾಯಿ ಜೀವವಿಮೆಯನ್ನು ಸಂಗ್ರಹಿಸಿದ್ದ ಎಲ್ಐಸಿ ಏಜೆಂಟ್ ನ್ನು ಪೊಲೀಸರು ಬಂಧಿಸಿದ್ದಾರೆ. ಪುರಿ ಜಿಲ್ಲೆಯ ಕನಸ್ ಪೊಲೀಸ್ ಠಾಣಾ ವ್ಯಾಪ್ತಿಯ ಜಡಕಟಾ ಗ್ರಾಮದ ಕಬಿರಾಜ್ ಬೆಹೆರಾ ಬಂಧಿತ ಆರೋಪಿ.
ಈತ 2003ರಿಂದ ಎಲ್ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. 2013 ರಿಂದ 2019ರ ಅವಧಿಯಲ್ಲಿ ನಾಲ್ವರು ಸತ್ತ ವ್ಯಕ್ತಿಗಳ ಹೆಸರಲ್ಲಿ 23 ಪಾಲಿಸಿಗಳನ್ನು ಮಾಡಿಸಿದ್ದ. ಅಲ್ಲದೇ ದಾಖಲೆಗಳಲ್ಲಿ ಅವರು ಬದುಕಿದ್ದಾರೆ ಎಂದು ತೋರಿಸಿದ್ದ.
ಪಾಲಿಸಿ ರಿಜಿಸ್ಟರ್ ಮಾಡಿದ ಮೂರರಿಂದ ಐದು ವರ್ಷಗಳ ಬಳಿಕ ವಿಮಾದಾರರ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರಗಳನ್ನು ನೀಡಿ ಹಣವನ್ನು ಪಡೆಯುತ್ತಿದ್ದ. ಕಬಿರಾಜ್ ಕಳ್ಳಾಟದ ಬಗ್ಗೆ ಶಂಕೆ ಹೊಂದಿದ್ದ ಖುದ್ರಾ ಎಲ್ಐಸಿ ಶಾಖೆಯ ಹಿರಿಯ ಅಧಿಕಾರಿ ಈ ಸಂಬಂಧ ದೂರು ದಾಖಲಿಸಿದ್ದರು.
ಬಂಧಿತ ಕಬಿರಾಜ್ ವಿರುದ್ಧ ಸೆಕ್ಷನ್ 420, 467,468,471 ಹಾಗೂ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಮಾದಾರರು ಸಾವನ್ನಪ್ಪಿದ ಬಳಿಕ ಪಾಲಿಸಿ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅದರೆ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸತ್ತ ವ್ಯಕ್ತಿಗಳ ಹೆಸರಲ್ಲಿ ವಿಮೆ ಮಾಡಿಸಿ ಹಣವನ್ನು ದೋಚಲಾಗಿದೆ.
23 ನಕಲಿ ಪಾಲಿಸಿಗಳ ಮೂಲಕ 1.81 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಇಒಡಬ್ಲು ಎಸ್ಪಿ ಜೈ ನಾರಾಯಣ್ ಪಂಕಜ್ ಹೇಳಿದ್ದಾರೆ.