ಬೆಂಗಳೂರು : ಗ್ಯಾರಂಟಿಯ ಹಣ ಕೊಡುವುದು ಹಾಗಿರಲಿ, ಮೊದಲು ನೌಕರರ ಸಂಬಳ ಕೊಡಿ ಸ್ವಾಮಿ ಎಂದು ಬಿಜೆಪಿ ಟ್ವೀಟ್ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
BMTC ನೌಕರರಿಗೆ ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ..! KSRTC ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ..! ಮೂರು ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರು ಸಂಬಳವನ್ನೇ ಕಂಡಿಲ್ಲ..! ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಗೂ ಸಂಬಳ ಸಿಕ್ಕಿಲ್ಲ..! ಸರ್ಕಾರಿ ಶಾಲಾ ಶಿಕ್ಷಕರಿಗೂ ತಿಂಗಳಾದರೂ ಖಾತೆಗೆ ಜಮೆ ಆಗದ ಸಂಬಳ..! ಗುತ್ತಿಗೆ ಆಧಾರದ ಸರ್ಕಾರಿ ನೌಕರರಿಗೆ ತಲುಪಿಲ್ಲ ಸಂಬಳ..! ಇನ್ನೂ ಹಲವು ಇಲಾಖೆಗಳ ಸರ್ಕಾರಿ ನೌಕರರು ಸಂಬಳ ಸಿಗದೆ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟ ಸಿದ್ದರಾಮಯ್ಯ ಅವರ ಸರ್ಕಾರ, ಗ್ಯಾರಂಟಿಯ ಹಣ ಕೊಡುವುದು ಹಾಗಿರಲಿ, ಮೊದಲು ನೌಕರರ ಸಂಬಳವನ್ನು ಜಾರಿಗೊಳಿಸಿ ಸ್ವಾಮಿ. ಬಿಜೆಪಿ ಟ್ವೀಟ್ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಇನ್ನೊಂದು ಟ್ವೀಟ್ ನಲ್ಲಿ ರಾಜ್ಯದ ಗುತ್ತಿಗೆದಾರರಿಗೆ #ATMSarkara ದ ಆಡಳಿತಾವಧಿಯಲ್ಲಿ ಬಿಲ್ ಬಾಕಿ ‘ನಿಶ್ಚಿತ’, ಅವಮಾನ ‘ಉಚಿತ’, ಬೆದರಿಕೆ ‘ಖಚಿತ’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಿ.ಬಿ.ಎಂ.ಪಿ ಗುತ್ತಿಗೆದಾರರ ಬಳಿಕ ಈಗ ರಾಯಚೂರು ಗುತ್ತಿಗೆದಾರರು ಸಹ, ದಿವಾಳಿ ಸರ್ಕಾರದ ದುರ್ಬಲ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರ ಮಾತ್ರ ಗುತ್ತಿಗೆದಾರರನ್ನೇ ತಪ್ಪಿತಸ್ಥರನ್ನಾಗಿಸಿ, ತನಗೆ ತಾನೇ ಸಾಚಾತನದ ಸರ್ಟಿಫಿಕೇಟ್ ನೀಡಿಕೊಳ್ಳುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.