ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ, ಇಬ್ಬರಲ್ಲಿ ಲಷ್ಕರ್-ಎ-ತೈಬಾದ(ಎಲ್ಇಟಿ) ಪಾಕಿಸ್ತಾನಿ ಭಯೋತ್ಪಾದಕನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರ ಅವಿತಿರುವ ಬಗ್ಗೆ ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರ ಜಿಲ್ಲೆಯ ಚೆಯಾನ್ ದೇವ್ಸರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಗುಂಡಿನ ಚಕಮಕಿ ನಂತರ ಎನ್ ಕೌಂಟರ್ ನಡೆಯಿತು. ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್(ಐಜಿಪಿ) ವಿಜಯ್ ಕುಮಾರ್, ಸಿಕ್ಕಿಬಿದ್ದ ಉಗ್ರರಲ್ಲಿ ಒಬ್ಬ ಪಾಕಿಸ್ತಾನಿ ಎಂದು ಹೇಳಿದ್ದು, ಭಯೋತ್ಪಾದಕ ಹೈದರ್ ಎರಡು ವರ್ಷಗಳಿಂದ ಉತ್ತರ ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ ಮತ್ತು ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಮಾಹಿತಿ ನೀಡಿದರು.