
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ಚಿರತೆ ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಚಿರತೆ ದಾಳಿಯಿಂದ ಮನೆಯ ನಾಯಿ ತಪ್ಪಿಸಿಕೊಂಡಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಚಿರತೆ ನುಗ್ಗಿದ ದೃಶ್ಯ ಸೆರೆಯಾಗಿದೆ. ಕಾಗೇರಿ ಅವರು ಮನೆಯಲ್ಲಿರುವಾಗಲೇ ಘಟನೆ ನಡೆದಿದೆ.
ನಿನ್ನೆ ರಾತ್ರಿ 11 ಗಂಟೆಗೆ ಚಿರತೆ ಆಹಾರ ಅರಸಿಕೊಂಡು ಬಂದಿದೆ. ತೋಟದ ಭಾಗದಿಂದ ನಾಯಿಯನ್ನು ಚಿರತೆ ಅಟ್ಟಿಸಿಕೊಂಡು ಬಂದಿದೆ. ಆದರೆ ನಾಯಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏನೂ ಸಿಗದ ಹಿನ್ನಲೆಯಲ್ಲಿ ಚಿರತೆ ಮತ್ತೆ ಕಾಡಿನತ್ತ ತೆರಳಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.