ಚಿರತೆಯೊಂದು ಹತ್ತು ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಸುಹೆಲ್ವಾ ವನ್ಯಜೀವಿ ಅಭಯಾರಣ್ಯದ ಬಳಿಯ ಮಜ್ಗವಾನ್ ಗ್ರಾಮದ ಸಂದೀಪ್ ಪ್ರಕೃತಿಯ ಕರೆಯನ್ನು ತೀರಿಸಲು ಮನೆಯಿಂದ ಹೊರಬಂದಾಗ ಮರದ ಹಿಂದೆ ಕುಳಿತಿದ್ದ ಚಿರತೆ ಅವನ ಮೇಲೆ ದಾಳಿ ಮಾಡಿದೆ.
ಬಳಿಕ ಚಿರತೆ ಸಮೀಪದ ಕಬ್ಬಿನ ಗದ್ದೆಗೆ ಎಳೆದೊಯ್ಯಲು ಆರಂಭಿಸಿದೆ. ಸಂದೀಪನ ಅಳು ಕೇಳಿದ ಅಜ್ಜಿ ಹೊರಗೆ ಹೋಗಿ ಎಲ್ಲರನ್ನು ಎಚ್ಚರಿಸಿದರು. ಜನರು ಬರುತ್ತಿದ್ದಂತೆ ಪ್ರಾಣ ಬಿಟ್ಟಿದ್ದ ಮಗುವನ್ನು ಬಿಟ್ಟು ಚಿರತೆ ಕಾಡಿಗೆ ಹೋಯಿತು.
ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಮಹೇಂದ್ರಕುಮಾರ್ ಮಾತನಾಡಿ, ಚಿರತೆಯನ್ನು ಹಿಡಿದು ಮೃಗಾಲಯಕ್ಕೆ ಸಾಗಿಸಲು ಸೂಚನೆ ನೀಡಲಾಗಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ನಿವಾಸಿಗಳಿಗೆ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾತ್ರಿಯ ವೇಳೆ ಮಕ್ಕಳನ್ನು ಒಂಟಿಯಾಗಿ ಬಿಡದಂತೆ ಹಾಗೂ ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಬೆಳಕಾಗಿ ಇರುವಂತೆ ನೋಡಿಕೊಳ್ಳಬೇಕೆಂದು ವಿಭಾಗೀಯ ಅರಣ್ಯಾಧಿಕಾರಿ ಎಂ.ಸೆಮ್ ಮಾರನ್ ಗ್ರಾಮಸ್ಥರನ್ನು ಒತ್ತಾಯಿಸಿದ್ದಾರೆ.
ಚಿರತೆ ಪತ್ತೆಗೆ ಅರಣ್ಯದ ಹೊರವಲಯದ ಗ್ರಾಮಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುವುದು ಎಂದು ಡಿಎಫ್‌ಒ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ಇದೇ ರೀತಿಯ ಹಲವಾರು ಘಟನೆಗಳು ಅರಣ್ಯ ಸಮೀಪದ ಗ್ರಾಮಗಳಲ್ಲಿ ನಡೆದಿವೆ. ಇತ್ತೀಚೆಗೆ ತನ್ನ ಅಜ್ಜನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಆರು ವರ್ಷದ ಬಾಲಕ ಚಿರತೆ ದಾಳಿಯಿಂದ ಗಾಯಗೊಂಡಿದ್ದ.