ತಿರುಪತಿ: ತಿರುಮಲದ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ತೆರಳುತ್ತಿದ್ದಾಗ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿ, ಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಆಗಸ್ಟ್ 11ರಂದು ಕುಟುಂಬವೊಂದು ತಿರುಮಲದ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟಹತ್ತಿ ಹೋಗುತ್ತಿದ್ದಾಗ ಚಿರತೆ ದಾಳಿ ನಡೆಸಿತ್ತು. 6 ವರ್ಷದ ಬಾಲಕಿ ಲಕ್ಷಿತಾಳನ್ನು ಕಾಡಿನಲ್ಲಿ ಎಳೆದೊಯ್ದ ಚಿರತೆ ಬಾಲಕಿಯ ಅರ್ಧ ದೇಹವನ್ನೇ ತಿಂದು ಹಾಕಿತ್ತು. ಮಾರನೆಯ ದಿನ ಬೆಳಿಗ್ಗೆ ಬಾಲಕಿಯ ಮೃತದೇಹ ದೇವಸ್ಥಾನದ ಸಮೀಪವೇ ಪತ್ತೆಯಾಗಿತ್ತು. ಈ ಘಟನೆಯಿಂದಾಗಿ ಭಕ್ತರು ತೀವ್ರ ಆತಂಕಕ್ಕೊಳಗಾಗಿದ್ದರು.
ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ನರಸಿಂಹಸ್ವಾಮಿ ದೇವಾಲಯದ ಸುತ್ತಮುತ್ತ, ಅರಣ್ಯ ಪ್ರದೇಶದಲ್ಲಿ ಬೋನುಗಳನ್ನು ಇಟ್ಟಿದ್ದರು. ಇದೀಗ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಬೋನಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವ ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸೆರೆ ಸಿಕ್ಕ ಚಿರತೆ ನರಭಕ್ಷಕ ಚಿರತೆ ಹೌದೋ ಅಲ್ಲವೋ ಎಂಬ ಬಗ್ಗೆಯೂ ಪರೀಕ್ಷಿಸಲಾಗುತ್ತಿದೆ. ಅಲ್ಲದೇ ಗಾಯಾಳು ಚಿರತೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಂತರ ಚಿರತೆಯನ್ನು ಎಲ್ಲಿ ಬಿಡಬೇಕು ಎಂಬ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಅಲಿಪಿಲಿ ಹಾಗೂ ತಿರುಮಲದ ಪಾದಚಾರಿ ಮಾರ್ಗದಲ್ಲಿ ಭಕ್ತರಿಗೆ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಧ್ಯಾಹ್ನ 2 ಗಂಟೆ ನಂತರ ಬೆಟ್ಟದ ಮೆಟ್ಟಿಲುಗಳ ಮೇಲೆ ತೆರಳು ಅನುಮತಿ ನಿರ್ಬಂಧಿಸಲಾಗಿದೆ. 7ನೇ ಮೈಲಿಯಲ್ಲಿ ಮಕ್ಕಳ ಕೈಗೆ ಟ್ಯಾಗ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ ಪೋಷಕರ ವಿವರ, ಭದ್ರತಾ ಸಿಬ್ಬಂದಿ ಟೋಲ್ ಫ್ರೀ ಸಂಖ್ಯೆ ಇತರ ವಿವರಗಳನ್ನು ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.