ಗದಗ: ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಜಿಗೇರಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿದೆ.
ಉದಯ(18) ಚಿರತೆ ದಾಳಿಗೆ ಒಳಗಾದ ಯುವಕ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಎದೆಗೆ ಬಾಯಿ ಹಾಕಿದ್ದು, ಬೆನ್ನು ಮತ್ತು ಮೈ ಮೇಲೆ ಉಗುರು, ಬಾಯಿಯಿಂದ ಕಚ್ಚಿ ಗಾಯಗೊಳಿಸಿದೆ. ಚಿರತೆ ದಾಳಿಯಿಂದ ಆತಂಕಗೊಂಡ ಉದಯ ಮತ್ತು ಅವರ ಅಕ್ಕ ಪಕ್ಕದಲ್ಲಿದ್ದವರು ಜೋರಾಗಿ ಕೂಗಾಡಿದ್ದಾರೆ.
ಈ ವೇಳೆ ಚಿರತೆ ಭಯಗೊಂಡು ಪರಾರಿಯಾಗಿದೆ. ಕೂದಲೆಳೆ ಅಂತರದಲ್ಲಿ ಉದಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಅವರನ್ನು ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐದು ದಿನದ ಹಿಂದೆ ಬೋನ್ ಇರಿಸಲಾಗಿತ್ತು ಎನ್ನಲಾಗಿದೆ.