ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸರ್ಕಾರ ಹೊರಡಿಸಿದ ಮೂರು ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದ ವಿಧೇಯಕಗಳು ಮಂಡನೆಯಾಗಲಿವೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುವರ್ಣ ಸೌಧದಲ್ಲಿ ಭಾನುವಾರ ಅಧಿವೇಶನದ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಪ್ರತಿಬಾರಿಯಂತೆ ಈ ಬಾರಿಯೂ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ಈಗಾಗಲೇ ಹೊರಡಿಸಿದ ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಸ್ವರಾಜ್ ತಿದ್ದುಪಡಿ ವಿಧೇಯಕ, ಕರಾವಳಿ ಕರ್ನಾಟಕ ಅಭಿವೃದ್ಧಿ ಮಂಡಳಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವಾ ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಗುವುದು. ಇವುಗಳೊಂದಿಗೆ ಇನ್ನೂ ಹಲವು ವಿದೇಯಕಗಳು ಮಂಡನೆಯಾಗುವ ಸಾಧ್ಯತೆ ಇದೆ.