ಬೆಂಗಳೂರು: ಮುಂದಿನ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದು ನೂತನ ನಾಯಕರನ್ನು ಆಯ್ಕೆ ಮಾಡಲಾಗುವುದು. ಮುಂದಿನ ಶುಕ್ರವಾರವೇ ವಿರೋಧ ಪಕ್ಷದ ನಾಯಕರು ಯಾರಾಗಬೇಕೆಂದು ತೀರ್ಮಾನಿಸಲಾಗುವುದು ಎಂದು ಬಿಜೆಪಿ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತೇನೆ. ಅಧ್ಯಕ್ಷನಾಗಿ ನೇಮಿಸಿದ್ದಕ್ಕೆ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯ ಬಿಜೆಪಿಯ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ. ಅತಿ ಹೆಚ್ಚು ಸಂಸದರನ್ನು ಗೆಲ್ಲಿಸುತ್ತೇವೆ. 2024ರ ಲೋಕಸಭಾ ಚುನಾವಣೆ ಬಹಳ ಸವಾಲಿನಿಂದ ಕೂಡಿದ್ದು, ಹೆಚ್ಚು ಸ್ಥಾನ ಗೆಲ್ಲಿಸುವಲ್ಲಿ ಎಲ್ಲಾ ರೀತಿಯ ಶ್ರಮ ಹಾಕುತ್ತೇವೆ. ಮೋದಿಯವರ ಕೈ ಬಲಪಡಿಸುತ್ತೇವೆ. ಯಡಿಯೂರಪ್ಪನವರ ಮಗ ಎಂದು ಹೇಳಲು ನನಗೆ ಹೆಮ್ಮೆ ಇದೆ. ನನಗೆ ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸುತ್ತೇನೆ ಎಂದು ತಿಳಿಸಿದ್ದಾರೆ.
ಮುಂದಿನ ಶುಕ್ರವಾರ ವೀಕ್ಷಕರು ಬರಲಿದ್ದು, ಶಾಸಕಾಂಗ ಸಭೆ ನಡೆಸಿ ವೀಕ್ಷಕರ ಸಮ್ಮುಖದಲ್ಲಿ ವಿಪಕ್ಷ ನಾಯಕರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.