ಬೆಂಗಳೂರು : ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು, ಬಜೆಟ್ ಗೂ ಮುನ್ನ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಸದನದಲ್ಲಿ ಹೇಗೆ ಇರಬೇಕು, ಹೇಗೆ ಮಾತನಾಡಬೇಕು ಎಂದು ಒಗ್ಗಟ್ಟು ಪ್ರದರ್ಶಿಸುವಂತೆ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ. ಬಜೆಟ್ ಹಾಗೂ ಸದನದಲ್ಲಿ ಹೇಗೆಲ್ಲ ಮಾತನಾಡಬೇಕು ಎನ್ನುವುದರ ಬಗ್ಗೆ ಶಾಸಕರು, ಸಚಿವರಿಗೆ ಸಿಎಂ ಸಲಹೆ ನೀಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು 14 ನೇ ಬಾರಿಗೆ ರಾಜ್ಯ ಸರ್ಕಾರದ ಆಯವ್ಯಯ ಮಂಡಿಸಿ ದಾಖಲೆ ನಿರ್ಮಿಸುತ್ತಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ದೂರ ದೃಷ್ಟಿ ಆಲೋಚನೆಗಳನ್ನು ಕ್ರೂಢೀಕರಿಸಿ ಮಹತ್ವದ ಬಜೆಟ್ ಮಂಡನೆ ಮಾಡಲಿದ್ದು, ರಾಜ್ಯದ ಜನರ ಚಿತ್ತ ಸಿಎಂ ಸಿದ್ದರಾಮಯ್ಯರತ್ತ ನೆಟ್ಟಿದೆ. ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದ್ದು, ಕೊಟ್ಟ ಭರವಸೆಯಂತೆ ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಳ ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.