ಬೆಳಗಾವಿ: ಸಿಐಡಿಗೆ ವಿಧಾನ ಪರಿಷತ್ ನಲ್ಲಿ ಮಹಜರಿಗೆ ಅನುಮತಿ ನೀಡಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ ನಲ್ಲಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಂಎಲ್ಸಿ ಟಿ.ಟಿ. ರವಿ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ವಿಧಾನ ಪರಿಷತ್ ನಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ ಎಂದು ಸಭಾಪತಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನ ಅನಿರ್ದಿಷ್ಟ ಮುಂದೂಡಿಕೆಯಾಗಿದ್ದು, ಲಾಕ್ ಆಗಿದೆ. ಸದನದ ಒಳಗೆ ಬಡಿದಾಟ, ಹೊಡೆದಾಟ ನಡೆದಿಲ್ಲ. ಪಂಚನಾಮೆ ಮಾಡಬೇಕು ಅಂದರೆ ಯಾವ ರೀತಿ ಮಾಡುತ್ತಾರೆ ಎನ್ನುವುದನ್ನು ಸಿಐಡಿ ಹೇಳಲಿ. ಸದ್ಯಕ್ಕೆ ಸಿಐಡಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ. ವಿಡಿಯೋ ಮತ್ತೊಮ್ಮೆ ಪರಿಶೀಲಿಸಿ ಎಫ್ಎಸ್ಎಲ್ ಗೆ ಕಳಿಸುತ್ತೇವೆ. ಸತ್ಯಾಂಶ ನೋಡಿ ನಮ್ಮದೇ ತೀರ್ಮಾನ ಮಾಡುತ್ತೇವೆ. ಸಂಧಾನಕ್ಕೂ ಯತ್ನಿಸುತ್ತೇವೆ ಎಂದು ಹೇಳಿದ್ದಾರೆ.