
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ಡಿಯಾಗೋ ನಜರೆತ್ ಮತ್ತು ಪ್ಲೇವಿಯಾ ದಂಪತಿ ಸೈಬರ್ ವಂಚನೆಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿನಲ್ಲೂ ಸಾರ್ಥಕತೆ ಕಾಣಲು ಬಯಸಿದ ಈ ವೃದ್ಧ ದಂಪತಿ, ತಮ್ಮ ದೇಹಗಳನ್ನು ವೈದ್ಯಕೀಯ ಅಧ್ಯಯನಕ್ಕೆ ದಾನ ಮಾಡುವ ಅಂತಿಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಕಾನೂನಿನ ತೊಡಕಿನಿಂದಾಗಿ ಅವರ ಆಸೆ ಈಡೇರಲಿಲ್ಲ.
ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ, ತಮ್ಮ ದೇಹಗಳನ್ನು ವೈದ್ಯಕೀಯ ಅಧ್ಯಯನಕ್ಕೆ ನೀಡಬೇಕೆಂದು ಉಲ್ಲೇಖಿಸಿದ್ದರು. ಆದರೆ, ಬೆಳಗಾವಿ ಜಿಲ್ಲಾ ಆಸ್ಪತ್ರೆ ಹಾಗೂ ಬಿಮ್ಸ್ ಅಧಿಕಾರಿಗಳು, ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲವೆಂದು ತಿಳಿಸಿದ್ದಾರೆ.
ಆಯುರ್ವೇದ ಆಸ್ಪತ್ರೆ ಮರಣೋತ್ತರ ಪರೀಕ್ಷಾ ವಿಭಾಗದ ಡಾ. ಮಹಾಂತೇಶ್ ಮಾತನಾಡಿ, “ದೇಹದಾನ ಮಾಡಲು ಕೆಲವು ಕಾನೂನುಗಳಿವೆ. ಸಹಜ ಸಾವು ಮತ್ತು ಇತರ ಕೆಲವು ಕಾರಣಗಳಿಂದ ಮೃತಪಟ್ಟವರ ದೇಹಗಳನ್ನು ಮಾತ್ರ ವೈದ್ಯಕೀಯ ಅಧ್ಯಯನಕ್ಕೆ ದಾನವಾಗಿ ಪಡೆಯಲು ಅವಕಾಶವಿದೆ. ಆತ್ಮಹತ್ಯೆ ಮಾಡಿಕೊಂಡವರ ದೇಹಗಳನ್ನು ಪಡೆಯಲು ಅವಕಾಶವಿಲ್ಲ. ಆದ್ದರಿಂದ, ಡಿಯಾಗೋ ಮತ್ತು ಪ್ಲೇವಿಯಾ ಅವರ ದೇಹಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದರು.
ಅಂತಿಮವಾಗಿ, ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ನಂತರ, ಅವರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.