ಕಲಬುರಗಿ : ಕಲಬುರಗಿ ನಗರದಾದ್ಯಂತ ಆಸ್ಪತ್ರೆಯಲ್ಲಿ ರೋಗಿ ಸಂಬಂಧಿಕರು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ ಅಥವಾ ಆಸ್ಪತ್ರೆಯ ಆಸ್ತಿ-ಪಾಸಿ ಹಾನಿ ಮಾಡಿದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಚೇತನ್ ಆರ್. ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಮತ್ತು ಆಸ್ತಿ-ಪಾಸ್ತಿ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಜಿಮ್ಸ್, ಇ.ಎಸ್.ಐ.ಸಿ., ಕೆ.ಬಿ.ಎನ್., ಎಂ.ಆರ್.ಎಂ.ಸಿ ಮತ್ತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗಳ ಮೇಲೆ ಹಲ್ಲೆ, ಆಸ್ತಿ ಹಾನಿ ಮಾಡಿದಲ್ಲಿ ಕೂಡಲೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಆರೋಗ್ಯ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಇನ್ನೂ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಯ ನಿಷ್ಕಾಳಜಿಯಿಂದ ಯಾವುದೇ ರೋಗಿ ಸಾವನಪ್ಪಿದ್ದರೆ ಇಂತಹ ಪ್ರಕರಣಗಳಲ್ಲಿ ರೋಗಿ ಸಂಬಂಧಿಗಳು ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಪೊಲೀಸ್ ಠಾಣೆಗೆ ದೂರು ನೀಡಬೇಕು. ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಿದ ನಂತರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಆಸ್ಪತ್ರೆ ಮುಖ್ಯಸ್ಥರಿಂದ ಸಮಗ್ರ ಮಾಹಿತಿ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದರು.
ಸಭೆಯಲ್ಲಿ ಭಾಗವಹಿಸಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಗುರುಪಾಟೀಲ ಮಾತನಾಡಿ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿಗಳ ಮೇಲಿನ ಹಲ್ಲೆ ತಡೆಗಟ್ಟುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸಮ್ಮತಿಸಿದ ಪೊಲೀಸ್ ಆಯುಕ್ತ ಚೇತನ್ ಆರ್. ಅವರು, ಇಂತಹ ಘಟನೆಗಳು ನಡೆದಲ್ಲಿ ಕೂಡಲೆ ಸಮೀಪದ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದಲ್ಲಿ ಕೂಡಲೆ ನಮ್ಮ ಪೊಲೀಸ್ ತಂಡ ನೆರವಿಗೆ ಬರಲಿದೆ ಎಂದು ಅಭಯ ನೀಡಿದರು.
ಆಸ್ಪತ್ರೆ ಸಿಬ್ಬಂದಿಗಳ ಮತ್ತು ಆಸ್ತಿ-ಪಾಸ್ತಿ ಸುರಕ್ಷತೆ ದೃಷ್ಠಿಯಿಂದ ನಗರದಲ್ಲಿನ ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು ಸಿ.ಸಿ.ಟಿ.ವಿ. ಅಳವಡಿಸಿಕೊಳ್ಳಬೇಕಲ್ಲದೆ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ಸಂಸ್ಥೆಗಳ ಮುಖ್ಯಸ್ಥರಿಗೆ ಪೊಲೀಸ್ ಆಯುಕ್ತರು ತಿಳಿಸಿದರು.
ಮೊದಲು ಚಿಕಿತ್ಸೆ ನೀಡಿ
ಮೆಡಿಕಲ್ ಲೀಗಲ್ ಕೇಸ್ ಪ್ರಕರಣಗಳಲ್ಲಿ (ಅಪಘಾತ ಪ್ರಕರಣಗಳು) ಆಸ್ಪತ್ರೆಗೆ ಬರುವ ಗಾಯಾಳು ರೋಗಿಗೆ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಮೊದಲು ಚಿಕಿತ್ಸೆ ನೀಡಬೇಕು. ತದನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಇಂತಹ ಪ್ರಕರಣಗಳ ಕುರಿತು ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ದಾಖಲೆ ಇಡಬೇಕು ಎಂದು ಪೊಲೀಸ್ ಆಯಕ್ತ ಚೇತನ್ ಆರ್. ತಿಳಿಸಿದರು.