ಬೆಂಗಳೂರು : ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಈ ಬಗ್ಗೆ ನನಗೂ ಮಾಹಿತಿ ಬಂದಿದೆ. ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ತಪ್ಪು ಯಾರೇ ಮಾಡಿದರೂ ಅದು ತಪ್ಪು, ನನಗೂ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಘಟನೆ ಹಿನ್ನೆಲೆ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರ ನಿವಾಸದ ಇಡೀ ಮನೆಯನ್ನು ವಿದ್ಯುತ್ ದೀಪಗಳಿಂದ ಬೆಳಗಲಾಗಿದ್ದು, ಆದರೆ ಈ ದೀಪಾಲಂಕಾರಕ್ಕೆ ಮನೆಯ ರಸ್ತೆ ಬದಿಯಿರುವ ವಿದ್ಯುತ್ ಕಂಬದಿಂದ ನೇರವಾಗಿ ವೈರ್ ಹಾಕಿ ವಿದ್ಯುತ್ ಪಡೆಯಲಾಗಿದ್ದು, ಕಾಂಗ್ರೆಸ್ ಟ್ವಿಟರ್ ನಲ್ಲಿ ವಾಗ್ಧಾಳಿ ನಡೆಸಿದೆ.
ಓರ್ವ ಜವಾಬ್ದಾರಿಯುತ ರಾಜಕಾರಣಿಯಾಗಿ, ಮಾಜಿ ಮುಖ್ಯಮಂತ್ರಿಗಳಾಗಿ ವಿದ್ಯುತ್ ಕಳ್ಳತನ ಮಾಡುವಂತಹ ದಾರಿದ್ರ್ಯ ಬಂದಿದ್ದು ದುರಂತ. ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ದೀಪಾಲಂಕಾರ ಮಾಡಿದ್ದೀರಿ. ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿದ್ದರೆ ನಾವೇ ಉಚಿತ ವಿದ್ಯುತ್ ಪೂರೈಸುತ್ತಿದ್ದೆವು ಎಂದು ಟೀಕಿಸಿದೆ. ಅಲ್ಲದೇ ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಹೆಚ್.ಡಿ.ಕುಮರಸ್ವಾಮಿ ಈ ಬಗ್ಗೆ ಜನರಿಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದೆ.