ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಿದ್ದ ಛತ್ತೀಸ್ ಗಢ ಕಲಾವಿದೆ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 22ರ ಹರೆಯದ ಕಾಲೇಜು ವಿದ್ಯಾರ್ಥಿನಿ ಲೀನಾ ನಾಗವಂಶಿ ರಾಯ್‌ಗಢ್ ಜಿಲ್ಲೆಯ ತನ್ನ ಮನೆಯ ಟೆರೇಸ್‌ನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ತಾಯಿ ಮನೆಯಿಂದ ಹೊರಹೋಗಿದ್ದಾಗ ನೇಣು ಹಾಕಿಕೊಂಡಿದ್ದಾರೆ. ಅರ್ಧ ಗಂಟೆಯ ನಂತರ ತಾಯಿ ಮನೆಗೆ ವಾಪಸ್ ಬಂದಾಗ ಮಗಳು ಟೆರೇಸ್ ಮೇಲೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಆಕೆ ಬದುಕಿದ್ದಾಳೆ ಎಂದು ನಂಬಿ ಶವವನ್ನು ಕೆಳಗಿಳಿಸಿದ್ದರು. ಆದರೆ ಅಷ್ಟೊತ್ತಿಗೆ ಆಕೆಯ ಪ್ರಾಣ ಹೋಗಿತ್ತು.
ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಲೀನಾ ನಾಗವಂಶಿ ಓದಲು ಟೆರೇಸ್‌ಗೆ ಹೋಗಿದ್ದ ವೇಳೆ ದುಪಟ್ಟಾ ದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಲೀನಾ, ಕುಟುಂಬದ ಕಿರಿಯ ಮಗಳು. ಅವರು ಟಿಕ್‌ಟಾಕ್‌ನಲ್ಲಿ ಸಕ್ರಿಯರಾಗಿದ್ದರು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 10,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು.
ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ನಂತರ ಆಕೆಯ ಸಾವಿಗೆ ಕಾರಣ ಸಿಗಲಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆಕೆಯ ಫೋನ್ ವಶಪಡಿಸಿಕೊಳ್ಳಲಾಗಿದೆ.