ಬೆಂಗಳೂರು: ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಬೋಧಕ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೇರ ನೇಮಕಾತಿಗೆ ಲಭ್ಯವಿರುವ ಸುಮಾರು 1 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ವಿವಿಧ ವಿಷಯಗಳ 1194 ಉಪನ್ಯಾಸಕ ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯ್ಕೆ ಮಾಡಿದ್ದು, 1161 ಮಂದಿ ಸ್ಥಳ ನಿಯುಕ್ತಿ ಮಾಡಿಕೊಂಡಿದ್ದಾರೆ. ಕಾಲೇಜುಗಳು ಆರಂಭವಾದ ದಿನದಿಂದ ನೇಮಕ ಆದೇಶ ಜಾರಿಗೆ ಬರಲಿದೆ. ಅದಕ್ಕಿಂತ ಮೊದಲು ಉಪನ್ಯಾಸಕರುಗಳಿಗೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ 2487 ಹುದ್ದೆಗಳು ಖಾಲಿಯಾಗಿದ್ದು, ಈ ಹುದ್ದೆಗಳಿಗೆ ನೇಮಕಾತಿ ನಡೆಸುವ ಜೊತೆಗೆ ಉಳಿಯುವ ಖಾಲಿ ಹುದ್ದೆಗಳ ನೇಮಕಾತಿಗೆ ಶೀಘ್ರವೇ ನೇಮಕಾತಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.