ಬೆಂಗಳೂರು: ರಜೆ ನಗದೀಕರಣ ಸಂವಿಧಾನಬದ್ಧ ಹಕ್ಕು ಎಂದು ಹೈಕೋರ್ಟ್ ಆದೇಶ ನೀಡಿದೆ. ರಜೆ ನಗರೀಕರಣವನ್ನು ವಿವೇಚನೆಯ ಉಡುಗೊರೆ ಎಂದು ಪರಿಗಣಿಸಲಾಗದು. ಅದೊಂದು ಸಂವಿಧಾನದಡಿ ಲಭ್ಯವಿರುವ ಕಾನೂನು ಬದ್ಧ ಹಕ್ಕಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ರಜೆ ನಗದೀಕರಣ ಮಾಡದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ವಾಟರ್ ಮನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪಾವಗಡದ ಹೆಚ್. ಚೆನ್ನಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ರಜೆ ನಗದೀಕರಣ ಸಂವಿಧಾನದಡಿ ಲಭ್ಯವಿರುವ ಕಾನೂನು ಬದ್ಧ ಹಕ್ಕಾಗಿದೆ ಎಂದು ಹೇಳಿದ್ದು, 1.32 ಲಕ್ಷ ರೂಪಾಯಿಗಳನ್ನು ಶೇಕಡ 6ರ ಬಡ್ಡಿ ದರದಲ್ಲಿ ಮೂರು ತಿಂಗಳಲ್ಲಿ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.