ಯೋಗ ಮಾಡುವುದು ಅತ್ಯವಶ್ಯಕ. ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರುವ ಜನರು ಇತ್ತೀಚಿನ ದಿನಗಳಲ್ಲಿ ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಯೋಗ ಮಾಡುವ ಮೊದಲು ಕೆಲವೊಂದು ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ.
ಯೋಗ ಮಾಡುವಾಗ ಬಲವಂತ ಬೇಡ. ಎಷ್ಟು ಸಾಧ್ಯವೋ ಅಷ್ಟೆ ಮಾಡಿ. ಬಲವಂತವಾಗಿ ಮೈ ಬಗ್ಗಿಸಿದ್ರೆ ಅಪಾಯ ನಿಶ್ಚಿತ. ನರ ಹಾಗೂ ಸ್ನಾಯುಗಳ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇದು ಆಪತ್ತಿಗೆ ದಾರಿ ಮಾಡಿಕೊಡುತ್ತದೆ.
ಯೋಗ ಮಾಡುವ ಸಮಯ ಕೂಡ ಮಹತ್ವ ಪಡೆಯುತ್ತದೆ. ಒಂದು ದಿನ ಅರ್ಧ ಗಂಟೆ ಯೋಗ ಮಾಡಿದ್ರೆ ಮತ್ತೊಂದು ದಿನ ಮಾಡುವುದಿಲ್ಲ. ಇನ್ನೊಂದು ದಿನ ಒಂದು ಗಂಟೆ ಯೋಗ ಮಾಡ್ತಾರೆ. ಇದು ಒಳ್ಳೆಯದಲ್ಲ. ಸಕಾರಾತ್ಮಕ ಪ್ರಭಾವದ ಬದಲು ನಕಾರಾತ್ಮಕ ಪ್ರಭಾವ ಇದ್ರಿಂದಾಗುತ್ತದೆ.
ಯೋಗದ ಭಂಗಿ ತಿಳಿದಿದ್ರೆ ಸಾಲದು, ಭಂಗಿ ವೇಳೆ ಉಸಿರಾಟದ ವಿಧಾನ ತಿಳಿದಿರಬೇಕು. ಯಾವ ಸಮಯದಲ್ಲಿ ಉಸಿರೆಳೆದುಕೊಳ್ಳಬೇಕು, ಯಾವ ಸಮಯದಲ್ಲಿ ಉಸಿರು ಬಿಡಬೇಕು ಎಂಬುದನ್ನು ತಿಳಿದಿರಬೇಕು. 5 ರಿಂದ 10 ನಿಮಿಷ ಉಸಿರಿನ ಮೇಲೆ ಗಮನ ನೀಡಬೇಕಾಗುತ್ತದೆ.
ಊಟವಾದ ತಕ್ಷಣ ಯೋಗ ಮಾಡಬಾರದು. ಮೂರು ಗಂಟೆಗಳ ಅಂತರವಿರಬೇಕು. ಹಾಗೆ ಯೋಗ ಮಾಡುವ ಮಧ್ಯೆ ನೀರು ಸೇವನೆ ಮಾಡಬಾರದು. ಒಂದು ಗಂಟೆ ಮೊದಲು ಅಥವಾ ನಂತ್ರ ನೀರನ್ನು ಸೇವಿಸಬೇಕು.