ಭಾರತದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಭಾರತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅದ್ಭುತವಾದ ಕಡಲ ತೀರಗಳು, ಎತ್ತರದ ಪರ್ವತಗಳು, ನದಿಗಳು, ಜಲಪಾತಗಳು, ಕಣಿವೆಗಳು, ಮರುಭೂಮಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಆದರೆ ಭಾರತದಲ್ಲಿರುವ ಕೆಲವು ಪ್ರವಾಸಿ ತಾಣಗಳು ಇನ್ನೂ ಮರೆಯಲಿವೆ. ಅವುಗಳ ಬಗ್ಗೆ ತಿಳಿದುಕೊಳ್ಳಿ.
ಮಾರ್ಬಲ್ ರಾಕ್ಸ್ : ಈ ಸ್ಥಳ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಭೇಡಾಘಾಟ್ ನಲ್ಲಿದೆ. ಇದು ನರ್ಮದಾ ನದಿಯ ದಡದಲ್ಲಿದೆ. ಇದು ಅಮೃತಶಿಲೆಯ ಬಂಡೆಗಳಿಂದ ಕೆತ್ತಲಾದ ಸುಂದರವಾದ ಪ್ರದೇಶವಾಗಿದೆ. ಸುಮಾರು 8 ಕಿಮೀ ಉದ್ದದ ಸುಂದರವಾದ ಕಮರಿಯನ್ನು ಹೊಂದಿದೆ. ಈ ಹೊಳೆಯುವ ಬಂಡೆಯ ಮೇಲೆ ಬೀಳುವ ಸೂರ್ಯನ ಕಿರಣಗಳು ಬಹಳ ಅದ್ಭುತವಾಗಿ ಕಂಡುಬರುತ್ತದೆ. ಹಾಗಾಗಿ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ.
ಮೇಘಾಲಯದ ಮರದ ಬೇರಿನ ಸೇತುವೆ : ಇದು ಮೇಘಾಲಯದ ಈಶಾನ್ಯ ಭಾರತದಲ್ಲಿ ನೆಲೆಗೊಂಡಿದೆ. ಪರ್ವತಗಳಿಂದ ಆವೃತವಾಗಿರುವ ಮೋಡಗಳ ತವರೂರು ಎಂದು ಕರೆಯುವ ಈ ರಾಜ್ಯದಲ್ಲಿ ಸುಂದರವಾದ ನೈಸರ್ಗಿಕ ದೃಶ್ಯಗಳನ್ನು ಕಾಣಬಹುದು. ಇದರಲ್ಲಿ ಮರದ ಸೇತುವೆ ಕೂಡ ಒಂದು. ಮೇಘಾಲಯದ ಚಿರಾಪುಂಜಿಯಲ್ಲಿರುವ ಈ ಸೇತುವೆ ಜೀವಂತವಾಗಿರುವ ಮರದ ಬೇರುಗಳು ಒಂದಕ್ಕೊಂದು ಹೊಂದಿಕೊಂಡು ನಿರ್ಮಾಣವಾಗಿದೆ.
ಮಹಾರಾಷ್ಟ್ರದ ಸೂಜಿ ರಂಧ್ರ : ಮಹಾರಾಷ್ಟ್ರದ ಮಹಾಬಲೇಶ್ವರದ ಪ್ರವಾಸಿ ತಾಣಗಳಲ್ಲಿ ಇದು ಒಂದು. ಇಲ್ಲಿನ ಪರ್ವತದ ಒಂದು ನೋಟ ಸೂಜಿ ಬಿಂದುವಿನಂತೆ ಕಾಣುತ್ತದೆ. ಈ ಸ್ಥಳಕ್ಕೆ ಭೇಟಿ ನೀಡುವಂತಹ ಜನರು ಕೋವಾ ಕಣಿವೆ ಮತ್ತು ಸಾವಿತ್ರಿ ಕಣಿವೆಯಿಂದ ಸುತ್ತುವರೆದಿರುವ ಪ್ರತಾಪಗಢದ ಬೃಹತ್ ಕೋಟೆಯ ವಿಹಂಗಮ ನೋಟವನ್ನು ಸವಿಯಬಹುದು.
ಲೋಕ್ಟಾಕ್ ಸರೋವರ : ಮಣಿಪುರದಲ್ಲಿರುವ ಈ ಸರೋವರಕ್ಕೆ ಒಮ್ಮೆ ಭೇಟಿ ನೀಡಿ. ಶುದ್ಧ ನೀರಿಗೆ ಹೆಸರುವಾಸಿಯಾಗಿರುವ ಈ ಸರೋವರದಲ್ಲಿ ತೇಲುವ ಮಣ್ಣಿನ ದ್ವೀಪಗಳು ರೂಪುಗೊಂಡಿವೆ. ಹಾಗಾಗಿ ಇದನ್ನು ವಿಶ್ವದ ಏಕೈಕ ತೇಲುವ ಉದ್ಯಾನವನ ಎಂದು ಕರೆಯುತ್ತಾರೆ. ಇದು ಶುದ್ಧ ನೀರನ್ನು ಹೊಂದಿರುವ ಕಾರಣ ಇಲ್ಲಿ ಅನೇಕ ಜಲಚರಗಳು ವಾಸವಾಗಿವೆ. ಈ ಪ್ರದೇಶವನ್ನು ಸ್ಥಳೀಯ ಜನರು ಕುಂಡಿ ಎಂದು ಕರೆಯುತ್ತಾರೆ. ಇದು ನೈಸರ್ಗಿಕ ಸೌಂದರ್ಯ ಮತ್ತು ಅದ್ಭುತವಾದ ನೋಟವನ್ನು ಹೊಂದಿದೆ.
ಬೆಲಂ ಗುಹೆ : ಸಾಹಸವನ್ನು ಬಯಸುವ ಪ್ರವಾಸಿಗರು ಆಂಧ್ರಪ್ರದೇಶದ ಬೆಲಂ ಗುಹೆಗೆ ಭೇಟಿ ನೀಡಿ. ಇದು ಬಹಳ ಪ್ರಸಿದ್ಧವಾದ ಗುಹೆಯಾಗಿದೆ. ಇದರ ಉದ್ದ 3229 ಮೀಟರ್ ಇದೆ. ಇಲ್ಲಿನ ಬಂಡೆಗಳ ನೈಸರ್ಗಿಕ ಕಲಾಕೃತಿ ನಿಮ್ಮನ್ನು ಬೆರಗುಗೊಳಿಸುತ್ತದೆ. ಆದರೆ ಈ ಗುಹೆಯಲ್ಲಿ ಕೆಲವು ಭಾಗಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.