ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನಿಂದ ಭಾರತದ ಮಾಜಿ ಟೆನ್ನಿಸ್ ತಾರೆ ಲಿಯಾಂಡರ್ ಫೇಸ್ ಸ್ಪರ್ಧಿಸುವುದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈ ವಿಚಾರವಾಗಿ ಮಾತನಾಡಿರುವ ಲಿಯಾಂಡರ್ ಪೇಸ್ ಗೋವಾದಲ್ಲಿ ಟಿಎಂಸಿ ಸೇರ್ಪಡೆಯಾಗುವಂತೆ ನನಗೆ ಪಕ್ಷವು ನೇರವಾಗಿ ಸಂಪರ್ಕಿಸಿತ್ತು ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಹಾಗೂ ನನ್ನ ನಡುವಿನ ಸಂಬಂಧ ಬಹಳ ಹಿಂದಿನಿಂದಲೂ ಇದೆ. ನನ್ನ ತಾಯಿ ಪಶ್ಚಿಮ ಬಂಗಾಳದವರು. ಮಮತಾ ಬ್ಯಾನರ್ಜಿ ನಿಜವಾದ ಚಾಂಪಿಯನ್ ಎಂದು ಹೇಳಿದ್ರು.
ಗೋವಾದಲ್ಲಿ ಈ ಹಿಂದೆಯೂ ಅಸ್ತಿತ್ವ ಸಾಧಿಸಲು ಟಿಎಂಸಿ ಯತ್ನಿಸಿತ್ತು. ಆದರೆ ಕೆಲ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗದೇ ಹೋಗಿದ್ದರು. ಈ ವಿಚಾರವಾಗಿಯೂ ಮಾತನಾಡಿದ ಪೇಸ್, ಗೆಲ್ಲುವುದು ಹಾಗೂ ಸೋಲುವುದು ಜೀವನದ ಒಂದು ಭಾಗವಾಗಿದೆ. ಪ್ರಾಮಾಣಿಕತೆ ಹಾಗೂ ನಿಷ್ಠೆ ಎಲ್ಲಕ್ಕಿಂತ ಮುಖ್ಯವಾದದ್ದು ಎಂದು ಹೇಳಿದ್ರು.
18 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಪೇಸ್ ಅವರ ತಂದೆ ಗೋವಾದವರು. ಟೆನ್ನಿಸ್ ಆಟದಿಂದಾಗಿ ಅವರು ಸಾರ್ವಜನಿಕ ಜೀವನದಿಂದ ಕೊಂಚ ದೂರವೇ ಇದ್ದರು. ಆದರೆ ಇನ್ನು ನಾನು ಹಿಂತಿರುಗಿದ್ದೇನೆ. ನಾನು ಗೋವಾದಲ್ಲಿ ಸಮಾಜಸೇವಿ ಕಾರ್ಯಗಳನ್ನು ಮಾಡಲು ಒಳ್ಳೆಯ ಅವಕಾಶಗಳನ್ನು ಹುಡುಕುತ್ತಿದ್ದೇನೆ. ನಾನು ಭಾರತದ ಪರವಾಗಿಯೇ ಆಡುತ್ತೇನೆ. ಆದರೆ ಈಗ ನನ್ನ ವಾಹನ ಬದಲಾಗಿದೆ ಎಂದು ಹೇಳಿದ್ರು.
ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪೇಸ್, ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿದ್ದೇನೆ. ಇದನ್ನು ಮಮತಾ ಬ್ಯಾನರ್ಜಿ ನಿರ್ಧರಿಸಲಿ ಎಂದು ಹೇಳಿದ್ರು.
ಲಿಯಾಂಡರ್ ಪೇಸ್ ನಟ ನಫಿಸಾ ಅಲಿ ಅವರ ಜೊತೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿ ಸೇರ್ಪಡೆಯಾಗಿದ್ದರು.