ಜಪಾನ್ ನಲ್ಲಿ ಕ್ವಾಡ್ ನಾಯಕರೊಂದಿಗೆ ಪ್ರಧಾನಿ ಮೋದಿ ಭಾಗಿಯಾಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮೊದಲಾದ ಕ್ವಾಡ್ ನಾಯಕರೊಂದಿಗೆ ಟೋಕಿಯೋದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಕ್ವಾಡ್ ನಾಯಕರೊಂದಿಗೆ ಪ್ರಧಾನಿ ಮೆಟ್ಟಿಲಿನಿಂದ ಮುಂಭಾಗದಲ್ಲಿ ನಡೆದುಕೊಂಡು ಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದು ಭಾರತ ಜಗತ್ತನ್ನು ಮುನ್ನಡೆಸುತ್ತಿದೆ ಎನ್ನುವುದನ್ನು ಸೂಚಿಸುವಂತಿದೆ ಎಂದು ಹಲವರು ಕೊಂಡಾಡಿದ್ದಾರೆ. ಬಿಜೆಪಿ ನಾಯಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಧಾನಿಯವರನ್ನು ವಿಶ್ವದ ನಾಯಕ ಎಂದು ಶ್ಲಾಘಿಸಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವಿಟರ್ನಲ್ಲಿ ಫೋಟೋ ಹಂಚಿಕೊಂಡಿದ್ದು, ಜಗತ್ತನ್ನು ಮುನ್ನಡೆಸುತ್ತಿರುವ ಈ ಚಿತ್ರ ಸಾವಿರ ಪದಗಳಿಗೆ ಸಮನಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಕೂಡ ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದು ವಿಶ್ವಗುರು ಭಾರತ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ನಾಯಕಿ ಸ್ಮೃತಿ ಇರಾನಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನ ಸೇವಕರು. ಅವರಿಗೆ ದಾರಿ ತಿಳಿದಿದೆ, ದಾರಿ ತೋರಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗ್ಲೋಬಲ್ ಲೀಡರ್ ಎನ್ನುವ ಶೀರ್ಷಿಕೆಯೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.