ಬೆಂಗಳೂರು: ವಿಧಾನಸಭೆ ಚುನಾವಣೆ ನಡೆದ ಆರು ತಿಂಗಳ ನಂತರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ನಿರ್ಧರಿಸಲು ಇಂದು ಸಭೆ ನಿಗದಿಯಾಗಿದೆ.
ವಿಧಾನಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಸಚಿವರಾದ ಆರ್. ಅಶೋಕ್, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ವಿ. ಸುನಿಲ್ ಕುಮಾರ್ ಹೆಸರು ಮುಂಚೂಣಿಯಲ್ಲಿದ್ದು, ಗುಟ್ಟು ಬಿಡದ ವರಿಷ್ಠರು ಅಚ್ಚರಿಯ ಆಯ್ಕೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಪ್ರತಿಪಕ್ಷ ನಾಯಕ ಜವಾಬ್ದಾರಿ ಹೊರುವ ಬಿಜೆಪಿ ಶಾಸಕರು ಯಾರು ಎನ್ನುವ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿದ್ದು, ರಾಷ್ಟ್ರೀಯ ವೀಕ್ಷಕರು ಭಾಗವಹಿಸಲಿದ್ದಾರೆ. ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ಇಲ್ಲದಿದ್ದಲ್ಲಿ ದೆಹಲಿಯಲ್ಲಿ ಚರ್ಚಿಸಿ ಹೆಸರು ಪ್ರಕಟಿಸಬಹುದು ಎಂದು ಹೇಳಲಾಗಿದೆ.
ಮೇಲ್ಮನೆ ವಿಪಕ್ಷ ನಾಯಕನ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ, ರವಿಕುಮಾರ್, ಚಲವಾದಿ ನಾರಾಯಣಸ್ವಾಮಿ, ರಘುನಾಥ ರಾವ್ ಮಲ್ಕಾಪುರೆ. ವೈ.ಎ. ನಾರಾಯಣಸ್ವಾಮಿ ಹೆಸರು ಕೇಳಿ ಬರುತ್ತಿದೆ.