ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಪೂರಕವಾದ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪದತ್ಯಾಗ ನಿಶ್ಚಿತವೆಂದು ಹೇಳಲಾಗುತ್ತಿದೆ. ಭಾನುವಾರ ಸಂಜೆ ವೇಳೆಗೆ ಬರಲಿರುವ ಸಂದೇಶಕ್ಕಾಗಿ ಸಿಎಂ ಯಡಿಯೂರಪ್ಪ ಕಾಯುತ್ತಿದ್ದಾರೆ.
ಇದೇ ವೇಳೆ ಹೊಸ ನಾಯಕನ ಬಗ್ಗೆಯೂ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದರ ಜೊತೆಯಲ್ಲೇ ಹೊಸ ನಾಯಕನನ್ನು ಕೂಡ ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ವರಿಷ್ಠರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ನಾಳೆ ಸಂಜೆಯೊಳಗೆ ಎಲ್ಲ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಯಿದೆ.
ಸಂಡೇ ಸಂಜೆ ಸಿಎಂ ರಾಜೀನಾಮೆ ಬಗ್ಗೆ ಸಂದೇಶ ರವಾನೆಯಾಗುವ ಸಾಧ್ಯತೆಯಿದೆ. ಮಂಡೇ ಮಧ್ಯಾಹ್ನದೊಳಗೆ ಹೊಸ ನಾಯಕನನ್ನು ಕೂಡ ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಇಂದು ರಾತ್ರಿ ವೇಳೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಇತರೆ ನಾಯಕರು ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಯಡಿಯೂರಪ್ಪ ಅವರನ್ನೇ ಮುಂದುವರೆಸಬೇಕೆ ಅಥವಾ ರಾಜೀನಾಮೆ ಪಡೆದು ಹೊಸ ನಾಯಕನನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಎಲ್ಲವೂ ಚರ್ಚೆಯಾದಂತೆ ನಡೆದರೆ ಇವತ್ತು ಸಂಜೆಯ ನಂತರ ಸಿಎಂಗೆ ಸ್ಪಷ್ಟ ಸಂದೇಶ ರವಾನೆಯಾಗಬಹುದು ಎಂದು ಹೇಳಲಾಗಿದೆ, ಒಟ್ಟಿನಲ್ಲಿ ಸಂಡೇ ಸಂಜೆಯ ರಹಸ್ಯ ಸಂದೇಶದಂತೆ ಮಂಡೇ ಮಧ್ಯಾಹ್ನದೊಳಗೆ ಹೊಸ ಬದಲಾವಣೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.