ಬೆಳಗಾವಿ: ಇವತ್ತು ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಲು ಇಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದೇವರ ದಯೆಯಿಂದ ನಿನ್ನೆ ಮತ್ತು ಇವತ್ತು ಮಳೆ ಕಡಿಮೆಯಾಗಿದೆ. ಎರಡು ದಿನ ಮಳೆ ಕಡಿಮೆಯಾದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿಯೂ ಮಳೆ ಕಡಿಮೆಯಾಗಿದೆ. ಅಲ್ಲಿ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹ ಇಳಿಮುಖವಾಗುತ್ತಿದೆ. ಹೈಕಮಾಂಡ್ ನಿಂದ ಸಂಜೆ ವೇಳೆಗೆ ಸಂದೇಶ ಬರಬಹುದು. ಸಂದೇಶ ಬಂದರೆ ನಾನು ಹೇಳುತ್ತೇನೆ. ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮೇಲೆ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಸ್ವಾಮೀಜಿಗಳು ಸಮಾವೇಶ ನಡೆಸುವ ಅಗತ್ಯವಿರಲಿಲ್ಲ. ನನಗೆ ಪಕ್ಷದ ವರಿಷ್ಠರ ಮೇಲೆ ವಿಶ್ವಾಸವಿದೆ ಎಂದು ತಿಳಿಸಿದ ಯಡಿಯೂರಪ್ಪ, ದಲಿತ ಮುಖ್ಯಮಂತ್ರಿ ಮಾಡುವುದು ನಾನಲ್ಲ, ಹೈಕಮಾಂಡ್. ಇವತ್ತು ಸಂಜೆ ಹೈಕಮಾಂಡ್ ನಿಂದ ಯಾವ ಸಂದೇಶ ಬರಲಿದೆ ಎಂಬುದನ್ನು ನೋಡೋಣ ಎಂದು ತಿಳಿಸಿದ್ದಾರೆ.