ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲವೆಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಪ್ರಮುಖ ನಾಯಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಕೂಡ ನಾಯಕತ್ವ ಬದಲಾವಣೆ ಬಗ್ಗೆ ತೆರೆಮರೆಯಲ್ಲಿ ಚಟುವಟಿಕೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಬದಲಾವಣೆ ಜೊತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬದಲಾವಣೆ ಮಾಡಬೇಕೆಂದು ಭಿನ್ನರು ಒತ್ತಡ ಹೇರಿದ್ದಾರೆನ್ನಲಾಗಿದೆ.
ತೆರೆಮರೆಯ ರಾಜಕೀಯ ಚಟುವಟಿಕೆಗಳು ಮುಂದುವರೆದಿದ್ದು, ಬಿಜೆಪಿ ವರಿಷ್ಠರಿಗೆ ಭಿನ್ನರು ಒತ್ತಡ ಹೇರುತ್ತಿದ್ದಾರೆ. ಭಿನ್ನರ ಬಣದ ಶಾಸಕ ಅರವಿಂದ ಬೆಲ್ಲದ ದಿಢೀರ್ ದೆಹಲಿಗೆ ತೆರಳಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರ ಅಭಿಪ್ರಾಯ ಪಡೆಯುವಾಗ ಇನ್ನೊಬ್ಬ ನಾಯಕರನ್ನು ಜೊತೆಗೆ ಕಳುಹಿಸಬೇಕು. ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ವಾಸ್ತವ ಸ್ಥಿತಿ ಅರಿಯಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಎರಡು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಅನೇಕ ನಾಯಕರೂ ಕೂಡ ಸಿಎಂ ಯಡಿಯೂರಪ್ಪ ಬದಲಾವಣೆ ಇಲ್ಲವೆಂದು ತಿಳಿಸಿದ್ದಾರೆ. ಇದಾದ ನಂತರವೂ ಭಿನ್ನರ ಬಣದಲ್ಲಿ ನಾಯಕತ್ವ ಬದಲಾವಣೆ ಚಟುವಟಿಕೆಗಳು ನಡೆಯುತ್ತಿವೆ. ಕರ್ನಾಟಕ, ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿನ ಬೆಳವಣಿಗೆ ಬಗ್ಗೆ, ನಾಯಕತ್ವ ಬದಲಾವಣೆ ಕುರಿತಾಗಿ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯಬಹುದೆಂದು ಹೇಳಲಾಗಿದೆ.