ಕೊರೋನಾ ಹೊತ್ತಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಧ್ವನಿಯೆತ್ತಿದವರಿಗೆ ಬಿಸಿ ಮುಟ್ಟಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಣಾಕ್ಷತೆ ಮೆರೆದಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮತ್ತು ಬೆಳವಣಿಗೆಗಳು ನಡೆದಾಗ ಯಡಿಯೂರಪ್ಪ ತಮ್ಮದೇ ಆದ ಕಾರ್ಯತಂತ್ರದ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಬಿಜೆಪಿ ವರಿಷ್ಠರು ನಾಯಕತ್ವ ಬದಲಾವಣೆ ಬಗ್ಗೆ ಚಿಂತನೆ ನಡೆಸಿದ್ದರೂ ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಅದನ್ನು ಕಾರ್ಯಗತಗೊಳಿಸುವ ಸಾಧ್ಯತೆಯಂತೂ ಇಲ್ಲವೇ ಇಲ್ಲ ಎಂದು ಹೇಳಲಾಗಿದೆ.
ಯಡಿಯೂರಪ್ಪ ವಿರೋಧಿ ಪಾಳೆಯ ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದು, ನಾಯಕತ್ವ ಬದಲಾವಣೆಗೆ ಅಗತ್ಯವಾದ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಭಿನ್ನಮತೀಯರ ದಂಡು ದೆಹಲಿವರೆಗೂ ಹೋಗಿ ಬಂದಿದೆ. ಆದರೆ, ನಾಯಕತ್ವ ಬದಲಾವಣೆ ಬೆಳವಣಿಗೆ ನಡೆಯುತ್ತಿದ್ದಂತೆ ಕಾರ್ಯತಂತ್ರ ರೂಪಿಸಿದ ಸಿಎಂ ಯಡಿಯೂರಪ್ಪ ತಮ್ಮ ಬೆಂಬಲಿಗರ ಮೂಲಕ ಹೇಳಿದ್ದಾರೆ. ಗಾಳಿ ಸುದ್ದಿಗೆ ರೆಕ್ಕೆ ಪುಕ್ಕ ಬಂದಿವೆ. ಯಡಿಯೂರಪ್ಪನವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಆಪ್ತರ ಮೂಲಕ ಹೇಳಿಕೆ ಕೊಡಿಸಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಬೆಳವಣಿಗೆಗಳು ನಡೆಯುತ್ತಿರುವುದು ನಿಜ ಎಂದು ಸಚಿವ ಆರ್. ಅಶೋಕ್ ಹೇಳುವುದರೊಂದಿಗೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿದೆ. ಈ ಮೂಲಕ ಸ್ವಪಕ್ಷೀಯದಲ್ಲಿನ ವಿರೋಧಿಗಳಿಗೆ ಟಾಂಗ್ ನೀಡಿ ಹೈಕಮಾಂಡ್ಗೂ ಸ್ಪಷ್ಟವಾದ ಸಂದೇಶವನ್ನು ಸಿಎಂ ರವಾನಿಸಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ತೆರೆಮರೆಯಲ್ಲಿ ಬೆಳವಣಿಗೆಗಳು ನಡೆಯುತ್ತಿವೆ ಎಂಬುದನ್ನು ತಿಳಿದುಕೊಂಡ ಅವರು, ಈ ಹಿಂದೆ ಮಾಡಿದಂತೆ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲವೆನ್ನುವ ಸಂದೇಶವನ್ನು ಆಪ್ತರ ಮೂಲಕ ಕೊಡಿಸಿದ್ದಾರೆ. ತಮ್ಮನ್ನು ಬದಲಾಯಿಸಿದರೆ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ ಎನ್ನುವ ಬಗ್ಗೆ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ನಿರ್ವಹಣೆಯೇ ಸವಾಲಾಗಿದ್ದು ನಾಯಕತ್ವ ಬದಲಾವಣೆ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.
ಬಿಜೆಪಿ ವರಿಷ್ಠರು ರಾಜ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಈ ಹೊತ್ತಲ್ಲಿ ರಾಜಕಾರಣ, ನಾಯಕತ್ವ ಬದಲಾವಣೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ. ಈ ಮೂಲಕ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿದ್ದ ತೆರೆಮರೆ ಚಟುವಟಿಕೆಗಳನ್ನು ನಿಯಂತ್ರಿಸಿದ್ದಾರೆ.