ಬೈ ಎಲೆಕ್ಷನ್ ಭರಾಟೆ ಜೋರಾಗಿರುವ ಬೆನ್ನಲ್ಲೇ ರಾಜಕೀಯ ಕೆಸರೆರೆಚಾಟ ಕೂಡ ಹೆಚ್ಚಾಗಿದೆ. ಬಿಜೆಪಿ ನಾಯಕರು ಹಣ ಹಂಚಿ ಮತ ಬೇಟೆ ಮಾಡುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆರೋಪಕ್ಕೆ ವಿಜಯಪುರದ ಸಿಂದಗಿಯಲ್ಲಿ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ರು .
ಹಣ ಹಂಚಿಕೆ ಮಾಡಿ ಮತ ಪಡೆದು ನಮಗೆ ರೂಢಿ ಇಲ್ಲ. ನಮ್ಮ ಪಕ್ಷ ಅಷ್ಟೊಂದು ಕೆಳ ಮಟ್ಟಕ್ಕೆ ಇಳಿದೂ ಇಲ್ಲ. ಕಾಂಗ್ರೆಸ್ ಪಕ್ಷದವರೇ ಮೂಟೆ ಮೂಟೆ ಹಣ ತಂದು ಹಂಚಿ ಚುನಾವಣೆ ಗೆಲ್ಲಲು ಪ್ಲಾನ್ ಮಾಡಿರಬೇಕು. ಜನರ ನಾಡಿ ಮಿಡಿತ ಏನು ಅನ್ನುವುದು ಬಿಜೆಪಿಗೆ ಅರ್ಥವಾಗಿದೆ. ಈ ಕ್ಷೇತ್ರದಲ್ಲಿ ರಮೇಶ ಭೂಸನೂರ 25 ಸಾವಿರ ಮತಗಳ ಅಂತರದಲ್ಲಿ ಜಯಿಸಲಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಾಗೂ ಬೊಮ್ಮಾಯಿ ಆಡಳಿತವೇ ನಮಗೆ ವರದಾನವಾಗಲಿದೆ. ರಮೇಶ ಭೂಸನೂರು ಗೆಲುವು ಸೂರ್ಯ – ಚಂದ್ರರಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ರಪಡಿಸಿದ್ರು.
ಕಳೆದ ಬಾರಿ ಅನುಕಂಪದ ಮತ ಪಡೆದು ಮನಗೂಳಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಭೂಸನೂರ ಪರ ಜನರಿಗೆ ಒಲವಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಈ ಭಾಗದ ಜನತೆ ಶತಾಯಗತಾಯ ಯತ್ನಿಸುತ್ತಿದ್ದಾರೆ. ನಾಳೆ ಸಿಎಂ ಬೊಮ್ಮಾಯಿ ಕೂಡ ಇಲ್ಲಿನ 12 ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಮಧ್ಯಾಹ್ನದ ಬಳಿಕ ಪಟ್ಟಣದಲ್ಲಿ ಕ್ಯಾಂಪೇನ್ ನಡೆಸುತ್ತಾರೆ. ಈಶ್ವರಪ್ಪ ಕೂಡ ಪ್ರಚಾರ ಕಾರ್ಯಕ್ಕೆ ಆಗಮಿಸುತ್ತಾರೆ ಎಂದು ಹೇಳಿದ್ರು.