ಗುವಾಹಟಿ: ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಭಿನ್ನವಾಗಿ ಮುದ್ರಿಸುತ್ತಾರೆ. ಕೆಲವೊಮ್ಮೆ ಬಹಳ ಆಸಕ್ತಿದಾಯಕ ಮದುವೆ ಕಾರ್ಡ್ ಗಳನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಸಮಾಜವಾದಿ ಪಕ್ಷದ ಬಣ್ಣಗಳಲ್ಲಿ ಮುದ್ರಿಸಲಾದ ಯುಪಿ ವೆಡ್ಡಿಂಗ್ ಕಾರ್ಡ್‌ನಿಂದ ಹಿಡಿದು ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಫೋಟೋಗಳಿರುವ ವೆಡ್ಡಿಂಗ್ ಕಾರ್ಡ್ ಗಳು ಈ ಹಿಂದೆ ವೈರಲ್ ಆಗಿತ್ತು. ಇತ್ತ ಮಧುರೈ ದಂಪತಿಗಳು ಅತಿಥಿಗಳು ಉಡುಗೊರೆಗಳನ್ನು ಕಳುಹಿಸುವುದಕ್ಕಾಗಿ ಆಮಂತ್ರಣ ಪತ್ರಿಕೆಯಲ್ಲೇ ಕ್ಯೂಆರ್ ಕೋಡ್ ಅನ್ನು ಮುದ್ರಿಸಿದ್ದರು.
ಇಂತಹ ಸೃಜನಾತ್ಮಕ ವಿವಾಹ ಕಾರ್ಡ್‌ಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆಯೆಂದ್ರೆ ಅದು ಅಸ್ಸಾಂನ ಗುವಾಹಟಿಯ ವಕೀಲರದ್ದು. ವಕೀಲ ಅಜಯ್ ಶರ್ಮಾ ಅವರು ಹರಿದ್ವಾರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಪೂಜಾ ಶರ್ಮಾ ಅವರನ್ನು ವಿವಾಹವಾಗಲಿದ್ದಾರೆ. ಅಜಯ್ ತಮ್ಮ ವಿಶೇಷ ದಿನಕ್ಕಾಗಿ ಸಂವಿಧಾನ-ವಿಷಯದ ಮದುವೆ ಕಾರ್ಡ್ ಅನ್ನು ಮುದ್ರಿಸಿದ್ದಾರೆ.
ಸಮಾನತೆಯನ್ನು ಪ್ರತಿನಿಧಿಸುವ ನ್ಯಾಯದ ಮಾಪಕಗಳ ಎರಡೂ ಬದಿಯಲ್ಲಿ ವಧು ಮತ್ತು ವರನ ಹೆಸರನ್ನು ಬರೆಯಲಾಗಿದೆ. ಮದುವೆಯ ಆಮಂತ್ರಣವು ಭಾರತೀಯ ವಿವಾಹಗಳನ್ನು ನಿಯಂತ್ರಿಸುವ ಕಾನೂನುಗಳು ಮತ್ತು ಹಕ್ಕುಗಳನ್ನು ಸಹ ಉಲ್ಲೇಖಿಸುತ್ತದೆ.
ಮದುವೆಯಾಗುವ ಹಕ್ಕು, ಭಾರತೀಯ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಜೀವಿಸುವ ಹಕ್ಕಿನ ಒಂದು ಅಂಶವಾಗಿದೆ. ಹಾಗಾಗಿ, 28 ನವೆಂಬರ್ 2021 ರ ಭಾನುವಾರದಂದು ಈ ಮೂಲಭೂತ ಹಕ್ಕನ್ನು ಬಳಸುವ ಸಮಯವಾಗಿದೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ.
ಮದುಮಗ ಅಜಯ್, ಕಾರ್ಡ್ ಅನ್ನು ವಿನ್ಯಾಸಗೊಳಿಸಲು ತನ್ನ ಸ್ನೇಹಿತನ ಸಹಾಯ ಪಡೆದಿದ್ದಾರೆ. ಮತ್ತು ಅದನ್ನು ತನ್ನ ಸಹೋದ್ಯೋಗಿಗಳಿಗೆ ಕೊಡುವುದಕ್ಕಾಗಿ ಮುದ್ರಿಸಿದ್ದಾರೆ.
ಸದ್ಯ, ಈ ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.