ಬೆಂಗಳೂರು: ಹೆಲ್ಮೆಟ್ ಧರಿಸದ ವಿಚಾರಕ್ಕೆ ವಕೀಲರೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ.
ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಎಂಬುವವರ ಮೇಲೆ ಹೆಲ್ಮೆಟ್ ವಿಚಾರವಾಗಿ ಹಲ್ಲೆ ನಡೆಸಿದ್ದರು. ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ನಡೆಸಿದ್ದು ಆಘಾತಕಾರಿ ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ನಾಗರಿಕ ಸಮಾಜದಲ್ಲಿ ಇಂತಹ ಘಟನೆ ನಡೆಯಬಾರದು. ವಕೀಲರಿಗೇ ಹೀಗಾದರೆ ಇನ್ನು ಜನಸಾಮಾನ್ಯರ ಕಥೆ ಏನು? ಎಂದು ಪ್ರಶ್ನಿಸಿದೆ. ಈ ಘಟನೆ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಲು ಸೂಚಿಸಿದೆ.