ಮುಂಬೈ: NCP ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. 66 ವರ್ಷದ ನಾಯಕ ಸಿದ್ಧಿಕ್ ಶನಿವಾರ ರಾತ್ರಿ ಬಾಂದ್ರಾ ವೆಸ್ಟ್ ನಲ್ಲಿರುವ ತಮ್ಮ ನಿವಾಸಕ್ಕೆ ಕಚೇರಿಯಿಂದ ಹೊರಡುವಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.
ಗ್ಯಾಂಗ್ ಸದಸ್ಯನೊಬ್ಬನ ಫೇಸ್ಬುಕ್ ಪೋಸ್ಟ್ ಇದೀಗ ವೈರಲ್ ಆಗಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಅನುಜ್ ಥಾಪನ್ ಅವರೊಂದಿಗಿನ ಸಂಬಂಧವೇ ಸಿದ್ದಿಕ್ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
.”ಓಂ, ಜೈ ಶ್ರೀ ರಾಮ್, ಜೈ ಭಾರತ್” ಎಂದು ಪೋಸ್ಟ್ ನಲ್ಲಿ ಗ್ಯಾಂಗ್ ಸದಸ್ಯ ಬರೆದಿದ್ದು, “ನಾನು ಜೀವನದ ಸಾರವನ್ನು ಅರ್ಥಮಾಡಿಕೊಂಡಿದ್ದೇನೆ. ಸಂಪತ್ತು ಮತ್ತು ದೇಹವನ್ನು ಧೂಳಿನಂತೆ ಪರಿಗಣಿಸುತ್ತೇನೆ. ನಾನು ಸರಿಯಾದದ್ದನ್ನು ಮಾತ್ರ ಮಾಡಿದ್ದೇನೆ, ಸ್ನೇಹದ ಕರ್ತವ್ಯವನ್ನು ಗೌರವಿಸುತ್ತೇನೆ” ಎಂದು ತಿಳಿಸಿದ್ದಾನೆ.
ಸಲ್ಮಾನ್ ಖಾನ್, ನಾವು ಈ ಯುದ್ಧವನ್ನು ಬಯಸಲಿಲ್ಲ, ಆದರೆ ನೀವು ನಮ್ಮ ಸಹೋದರನನ್ನು ಅವನ ಪ್ರಾಣ ಕಳೆದುಕೊಳ್ಳುವಂತೆ ಮಾಡಿದ್ದೀರಿ. ಇಂದು ಬಾಬಾ ಸಿದ್ದಿಕ್ ಅವರ ಸಭ್ಯತೆಯ ಕೊಳ ಮುಚ್ಚಲ್ಪಟ್ಟಿದೆ ಅಥವಾ ಒಂದು ಕಾಲದಲ್ಲಿ ಅವರು MCOCA(ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ) ಅಡಿಯಲ್ಲಿದ್ದರು. ದಾವೂದ್ ಮತ್ತು ಅನುಜ್ ಥಾಪನ್ಗೆ ಬಾಲಿವುಡ್, ರಾಜಕೀಯ ಮತ್ತು ಆಸ್ತಿ ವ್ಯವಹಾರಗಳೊಂದಿಗಿನ ಸಂಪರ್ಕವೇ ಇದಕ್ಕೆ ಕಾರಣ.
ನಮಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ. ಆದರೆ, ಸಲ್ಮಾನ್ ಖಾನ್ ಅಥವಾ ದಾವೂದ್ ಗ್ಯಾಂಗ್ಗೆ ಸಹಾಯ ಮಾಡುವ ಯಾರಾದರೂ ಸಿದ್ಧರಾಗಿರಬೇಕು. ಯಾರಾದರೂ ನಮ್ಮ ಸಹೋದರರನ್ನು ಕೊಂದರೆ ನಾವು ಪ್ರತಿಕ್ರಿಯಿಸುತ್ತೇವೆ. ನಾವು ಮೊದಲು ಹೊಡೆಯುವುದಿಲ್ಲ. ಜೈ ಶ್ರೀ ರಾಮ್, ಜೈ ಭಾರತ್, ಹುತಾತ್ಮರಿಗೆ ಸೆಲ್ಯೂಟ್ ಎಂದು ಹೇಳಲಾಗಿದೆ.
ಬಾಬಾ ಸಿದ್ದಿಕ್ ಅವರನ್ನು ಶನಿವಾರ ರಾತ್ರಿ ಮುಂಬೈನಲ್ಲಿ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಕೂಡಲೇ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಾಬಾ ಸಿದ್ದಿಕ್ ಅವರ ಹತ್ಯೆಯು ಗುತ್ತಿಗೆ ಹತ್ಯೆ ಘಟನೆ ಎಂದು ಮುಂಬೈ ಪೊಲೀಸರು ಭಾನುವಾರ ಖಚಿತಪಡಿಸಿದ್ದಾರೆ.
ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ ಬಂಧಿತರಾಗಿದ್ದು, ಮೂರನೇ ಆರೋಪಿ ಉತ್ತರಪ್ರದೇಶದ ಶಿವಕುಮಾರ್ ಪರಾರಿಯಾಗಿದ್ದಾನೆ. ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಪತ್ತೆ ಮಾಡಲಾಗುತ್ತಿದೆ. ಕೊಲೆ ಪೂರ್ವ ಯೋಜಿತ ಕೊಲೆಯಾಗಿದ್ದು, ಆರೋಪಿಗಳಿಗೆ ಮುಂಗಡ ಹಣ ನೀಡಿ ಕೆಲ ದಿನಗಳ ಹಿಂದೆ ಶಸ್ತ್ರಾಸ್ತ್ರಗಳನ್ನು ತಲುಪಿಸಲಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.