ಭಾರತದ ಮೊಟ್ಟ ಮೊದಲ ಖಾಸಗಿ ಗಿರಿಧಾಮವಾದ ಪುಣೆಯಲ್ಲಿನ ಲಾವಾಸಾವನ್ನು ಡಾರ್ವಿನ್ ಪ್ಲಾಟ್‌ಫಾರ್ಮ್ ಮೂಲಸೌಕರ್ಯಕ್ಕೆ ಮಾರಾಟ ಮಾಡಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅನುಮತಿ ನೀಡಿದೆ.
ನೂರಾರು ಮನೆ ಖರೀದಿದಾರರು ಮತ್ತು ಸಾಲ ನೀಡುವವರ ಹಕ್ಕುಗಳನ್ನು ಪರಿಹರಿಸುವ ಕ್ರಮದಲ್ಲಿ NCLT ಅನುಮತಿ ನೀಡಿದ್ದು ಲಾವಾಸವನ್ನು 1.8 ಸಾವಿರ ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ.
ಸಾಲದಾತರು ನಿರ್ಣಯ ಯೋಜನೆಯ ಪರವಾಗಿ ಮತ ಚಲಾಯಿಸಿದ ನಂತರ ಡಾರ್ವಿನ್ ಪ್ಲಾಟ್ ಫಾರ್ಮ್ ಸಲ್ಲಿಸಿದ ರೆಸಲ್ಯೂಶನ್ ಯೋಜನೆಯನ್ನು NCLT ಅನುಮೋದಿಸಿದೆ. ಇಲ್ಲಿ ಡಾರ್ವಿನ್ ಪ್ಲಾಟ್ ಫಾರ್ಮ್ ಎಂಟು ವರ್ಷಗಳಲ್ಲಿ 1,814 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ. ಇದರಲ್ಲಿ ಸಾಲಗಾರರಿಗೆ ನೀಡುವ ಮೊತ್ತ 929 ಕೋಟಿ ರೂ. ಗಳನ್ನು ಒಳಗೊಂಡಿದ್ದು ಮನೆ ಖರೀದಿದಾರರಿಗೆ ಸಂಪೂರ್ಣವಾಗಿ ನಿರ್ಮಿಸಲಾದ ಮನೆಗಳನ್ನು ನೀಡಲು 438 ಕೋಟಿ ರೂ.ಗಳನ್ನು ವ್ಯಯಿಸುತ್ತದೆ.
ವಾಸ್ತವಿಕ ವೆಚ್ಚದ ಆಧಾರದ ಮೇಲೆ ಪರಿಸರ ಇಲಾಖೆ ಅನುಮತಿಯನ್ನು ಪಡೆದ ಐದು ವರ್ಷಗಳ ಅವಧಿಯಲ್ಲಿ ಮನೆ ಖರೀದಿದಾರರಿಗೆ ಸಂಪೂರ್ಣವಾಗಿ ನಿರ್ಮಿಸಲಾದ ಆಸ್ತಿಗಳನ್ನು ತಲುಪಿಸಲಾಗುತ್ತದೆ.
ಮನೆ ಖರೀದಿದಾರರು ಯೋಜನೆಯಲ್ಲಿ ನಿರ್ಮಿಸಿದ ಆಸ್ತಿಗಳನ್ನು ಪಡೆಯಲು ಡಾರ್ವಿನ್‌ಗೆ ಭವಿಷ್ಯದಲ್ಲಿ ಹೆಚ್ಚಾದ ನಿರ್ಮಾಣ ವೆಚ್ಚವನ್ನು ಪಾವತಿಸಬೇಕಾಗುತ್ತದೆ.
“ನಿರ್ಮಾಣ ವೆಚ್ಚಗಳಿಗೆ ಪಾರದರ್ಶಕ ಕಾರ್ಯವಿಧಾನವನ್ನು ಒದಗಿಸುವ ಸಲುವಾಗಿ ರೆಸಲ್ಯೂಶನ್ ಅರ್ಜಿದಾರರು ಎಫ್‌ಸಿಸಿಎ / ಮನೆ ಖರೀದಿದಾರರ ಪ್ರತಿನಿಧಿಗಳು ಮತ್ತು ರೆಸಲ್ಯೂಶನ್ ಅರ್ಜಿದಾರರ ನಿರ್ವಹಣಾ ತಂಡದ ಸಮಾನ ಪ್ರಾತಿನಿಧ್ಯವನ್ನು ಒಳಗೊಂಡಿರುವ 4 ಸದಸ್ಯರ ‘ನಿರ್ಮಾಣ ವೆಚ್ಚ ನಿರ್ಣಯ ಸಮಿತಿ’ಯನ್ನು ರಚಿಸಬೇಕೆಂದು ಪ್ರಸ್ತಾಪಿಸಿದ್ದಾರೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎನ್‌ಸಿಎಲ್‌ಟಿಯ ತಾಂತ್ರಿಕ ಮತ್ತು ನ್ಯಾಯಾಂಗ ಸದಸ್ಯರಾದ ಶ್ಯಾಮ್ ಬಾಬು ಗೌತಮ್ ಮತ್ತು ಕುಲದೀಪ್ ಕುಮಾರ್ ಕರೀರ್ ಈ ಆದೇಶ ಹೊರಡಿಸಿದ್ದಾರೆ.
ಮುಂಬೈ ಪ್ರಧಾನ ಕಛೇರಿಯ ಡಾರ್ವಿನ್ ಸಮೂಹವು ಈ ಹಿಂದೆ ಜೆಟ್ ಏರ್‌ವೇಸ್ ಮತ್ತು ರಿಲಯನ್ಸ್ ಕ್ಯಾಪಿಟಲ್‌ಗಾಗಿ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿ ತೋರಿಸಿತ್ತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಲ್ & ಟಿ ಫೈನಾನ್ಸ್, ಆರ್ ಸಿಎಲ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್ ಲಾವಾಸಾದ ಪ್ರಮುಖ ಹಣಕಾಸು ಸಾಲಗಾರರು.
ಪುಣೆ ಬಳಿಯ ಪಶ್ಚಿಮ ಘಟ್ಟಗಳ ಮುಲ್ಶಿ ಕಣಿವೆಯಲ್ಲಿ ನೆಲೆಗೊಂಡಿರುವ ಲಾವಾಸವನ್ನು ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿಯು ಯುರೋಪಿಯನ್ ಶೈಲಿಯ ನಗರವನ್ನು ರೂಪಿಸಿದೆ. ವಾರ್ಸ್‌ಗಾಂವ್ ನದಿಗೆ ಅಣೆಕಟ್ಟುಗಳನ್ನು ನಿರ್ಮಿಸಲು ಮತ್ತು ನಗರಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಲಾವಾಸಾ ಕಾರ್ಪೊರೇಷನ್ ಅನುಮತಿಯನ್ನು ಪಡೆದಿತ್ತು.
ಕಂಪನಿಯು ತನ್ನ ಪಾವತಿ ಬಾಧ್ಯತೆಗಳನ್ನು ಪೂರೈಸಲು ವಿಫಲವಾದ ನಂತರ, ಲಾವಾಸಾ ಅವರ ಸಾಲದಾತರಲ್ಲಿ ಒಬ್ಬರಾದ ರಾಜ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಇಂಡಿಯಾ ಆಗಸ್ಟ್ 2018 ರಲ್ಲಿ ಕಂಪನಿಯ ವಿರುದ್ಧ ದಿವಾಳಿತನದ ಅರ್ಜಿಯನ್ನು ಸಲ್ಲಿಸಿತು.