ನವದೆಹಲಿ: ದೀಪಾವಳಿ ಸಮೀಪಿಸುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ.
ದೀಪಾವಳಿ ಹಬ್ಬದ ವೇಳೆಗೆ ಆಹಾರ ಧಾನ್ಯಗಳ ಬೆಲೆ ನಿಯಂತ್ರಣದ ಉದ್ದೇಶದಿಂದ ಭಾರತ್ ಅಕ್ಕಿ, ಬೇಳೆ ಕಾಳುಗಳನ್ನು ಕಡಿಮೆ ದರದಲ್ಲಿ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ಕಡಿಮೆ ಮಾಡಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಬುಧವಾರ ದೆಹಲಿಯ ಕೃಷಿ ಭವನದಲ್ಲಿ ಕಡಿಮೆ ದರದಲ್ಲಿ ಆಹಾರ ಧಾನ್ಯ ಮಾರಾಟ ಮಾಡುವ ವಾಹನಗಳಿಗೆ ಅವರು ಚಾಲನೆ ನೀಡಿ ಮಾತನಾಡಿದರು.
ದೆಹಲಿಯ ಎನ್ಸಿಆರ್ ನಿವಾಸಿಗಳಿಗೆ ಕಡಲೆ ಬೇಳೆ ಕೆಜಿಗೆ 70 ರೂ., ಹೆಸರುಬೇಳೆ 107 ರೂ., ತೊಗರಿ ಬೇಳೆ 89 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಈ ಯೋಜನೆ ಕೈಗೊಂಡಿದ್ದು, ನಾಗರೀಕರ ಮೇಲೆ ಹೆಚ್ಚುತ್ತಿರುವ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಭಾರತ್ ಅಕ್ಕಿ, ಬೇಳೆ ಕಾಳುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇಂದು ಭಾರತ್ ದಾಲ್(ಬೇಳೆಗಳು) ಮಾರಾಟ ಮಾಡುವ ವ್ಯಾನ್‌ಗಳಿಗೆ ಚಾಲನೆ ನೀಡಲಾಗಿದೆ. ಕಳೆದ ವರ್ಷ ಎಲ್ ನೀನೋದ ಕಾರಣ, ಬೇಳೆಗಳ ಉತ್ಪಾದನೆಯು ಕಡಿಮೆಯಾಗಿದ್ದು, ನಾವು PSF(ಬೆಲೆ ಸ್ಥಿರೀಕರಣ ನಿಧಿಗಳ) ಮೂಲಕ ಆಮದು ಮಾಡಿಕೊಂಡು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಬಹಳ ರಾಜ್ಯಗಳು ತಮಗೆ ಹಂಚಿಕೆಯಾಗುತ್ತಿರುವ ಗೋಧಿಯ ಪ್ರಮಾಣವನ್ನು ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದವು. ಅದರಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಗೋಧಿಯ ಹಂಚಿಕೆಯನ್ನು ಹೆಚ್ಚಿಸಿ, ಭಾರತ್ ಆಟ್ಟಾವನ್ನು ಕೂಡ ಶುರು ಮಾಡಲಿದ್ದೇವೆ ಎಂದು ಹೇಳಿದ್ದಾರೆ.