ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್ಆರ್ ವಿಮಾನ ನಿಲ್ದಾಣ) ರೆಫೆಕ್ಸ್ ಇವೀಲ್ಜ್ ಸಹಯೋಗದೊಂದಿಗೆ 175 ಕಾಂಪ್ಯಾಕ್ಟ್ ಎಸ್ಯುವಿ ಎಲೆಕ್ಟ್ರಿಕ್ ಟ್ಯಾಕ್ಸಿಗಳಿಗೆ ಚಾಲನೆ ನೀಡಲಾಯಿತು.
ವಿಶ್ವ ಪರಿಸರ ದಿನದಂದು ಇದಕ್ಕೆ ಚಾಲನೆ ನೀಡಲಾಗಿದ್ದು, ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದರತ್ತ ಗಮನ ಹರಿಸಿದೆ.
ಬಿಐಎಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್ ಮತ್ತು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ ಅವರು ವಿಮಾನ ನಿಲ್ದಾಣದ ಆವರಣದಲ್ಲಿ ಹೊಸ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರಿ ಮರಾರ್, ವಿಮಾನ ನಿಲ್ದಾಣವು ಪರಿಸರ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ಬದ್ಧವಾಗಿದೆ . ವಿಶ್ವ ಪರಿಸರ ದಿನದ ಈ ಸಂದರ್ಭದಲ್ಲಿ, ನಮ್ಮ ಹೆಚ್ಚಿನ ಇಂಧನ ಆಧಾರಿತ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಮೂಲಕ ನಾವು ಮಹತ್ವದ ಹೆಜ್ಜೆ ಇಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿಗಳ ಸಂಖ್ಯೆಯನ್ನು ನಮ್ಮ ಒಟ್ಟು ಫ್ಲೀಟ್ ನ 50% ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ” ಎಂದು ಅವರು ಹೇಳಿದರು.