ಬೆಂಗಳೂರು: ವಂಚನೆ ಆರೋಪದಡಿ ಖ್ಯಾತ ನಟ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಆದೇಶ ನೀಡಿದೆ.
ಚಲನಚಿತ್ರ ನಿರ್ಮಾಣ ಸಂಬಂಧ ವಂಚನೆ ಆರೋಪದಡಿ ಚೆನ್ನೈ ಮೂಲದ ಕಂಪನಿ ದೂರು ಸಲ್ಲಿಸಿದ್ದು, ಒಂದನೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಕೋರ್ಟ್ ಆದೇಶ ನೀಡಿದೆ. ಆರೋಪಿ ವಿರುದ್ಧ ಹೆಸರಿಸಲಾದ ಆರೋಪಗಳು ಜಾಮೀನು ರಹಿತ ಸ್ವರೂಪ ಹೊಂದಿವೆ. ಅವರೇ ಖುದ್ದು ಹಾಜರಾಗಿ ನಂತರ ಹಾಜರಾತಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ.
ಲತಾ ರಜನಿಕಾಂತ್ ಅವರ ಪರ ವಕೀಲರು ಸುಪ್ರೀಂ ಕೋರ್ಟ್ ಆದೇಶದಂತೆ ಖುದ್ದು ಹಾಜರಾತಿಗೆ ವಿನಾಯಿತಿ ಇದ್ದು, ಖುದ್ದು ಹಾಜರಾತಿ ಆದೇಶ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಕೋರ್ಟ್ ಗಳು ಅಗತ್ಯ ಇದ್ದರೆ ವಿಚಾರಣೆಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಸೂಚನೆ ನೀಡಬಹುದು ಎಂದು ಹೇಳಿದೆ. ಹಾಗಾಗಿ ಮುಂದಿನ ವಿಚಾರಣೆಗೆ ಲತಾ ರಜನಿಕಾಂತ್ ಹಾಜರಾಗಿ ನಂತರ ವಿನಾಯಿತಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ.