ವಿಜಯಪುರ ಜಿಲ್ಲೆಯ ಲಚ್ಯಾಣದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಸಾತ್ವಿಕ್ ರಕ್ಷಣೆಗೆ ಕೊನೆ ಹಂತದ ಕಾರ್ಯಾಚರಣೆ ನಡೆಯುತ್ತಿದ್ದು, ಕಂದ ಬದುಕಿ ಬರಲೆಂದು ರಾಜ್ಯದ ಜನತೆ ಪ್ರಾರ್ಥಿಸುತ್ತಿದ್ದಾರೆ.
ಬಾಲಕ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದು ಈಗಾಗಲೇ 14 ಗಂಟೆಗಳು ಕಳೆದಿದ್ದು ಅನ್ನ ಆಹಾರವಿಲ್ಲದೆ ಮಗು ಇರುವುದನ್ನು ನೆನೆದು ತಾಯಿ ಸೇರಿದಂತೆ ಸಮೀಪದ ಬಂಧುಗಳು ಕಣ್ಣೀರಿಟ್ಟಿದ್ದಾರೆ.
ಬಾಲಕ ಸಾತ್ವಿಕ್ ತಲೆಕೆಳಗಾಗಿ ಬಿದ್ದಿದ್ದಾನೆಂದು ಹೇಳಲಾಗಿದ್ದು, ಕ್ಯಾಮರಾ ಇಳಿಬಿಟ್ಟು ಚಲನವಲನಗಳನ್ನು ಗಮನಿಸಲಾಗುತ್ತಿದೆ. ಅಲ್ಲದೆ ಉಸಿರಾಟಕ್ಕಾಗಿ ಆಕ್ಸಿಜನ್ ವ್ಯವಸ್ಥೆ ಸಹ ಮಾಡಲಾಗಿದೆ.
ಕೆಲಹೊತ್ತಿನಲ್ಲೇ ಬಾಲಕನನ್ನು ಕೊಳವೆ ಬಾವಿಯಿಂದ ಹೊರ ತರಲಾಗುತ್ತಿದೆ ಎಂದು ಹೇಳಲಾಗಿದ್ದು, ಹೀಗಾಗಿ ಸ್ಥಳದಲ್ಲಿ ಎರಡು ಆಂಬುಲೆನ್ಸ್ ಗಳನ್ನು ನಿಲ್ಲಿಸಲಾಗಿದೆ. ಕೊಳವೆ ಬಾವಿಯಿಂದ ಬಾಲಕ ಹೊರಬಂದ ಕೂಡಲೇ ಇಂಡಿ ತಾಲೂಕು ಆಸ್ಪತ್ರೆಗೆ ಆತನನ್ನು ಕರೆದೊಯ್ಯಲು ತಯಾರಿ ನಡೆಸಲಾಗಿದೆ.