ಕಳೆದ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಹಲವೆಡೆ ಆವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಭಾರೀ ಗಾಳಿಗೆ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ದೀಪಾಂಜಲಿ ನಗರ, ಕೆಂಗೇರಿ, ನಾಗರಬಾವಿ, ರಾಜರಾಜೇಶ್ವರಿ ನಗರ ಮೊದಲಾದ ಕಡೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು. ನಾಗರಬಾವಿಯ ಮಾನಸ ನಗರದಲ್ಲಿ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿದ್ದು ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ ಎನ್ನಲಾಗಿದ್ದು, ಬೆಂಗಳೂರಿನಲ್ಲಿ ರಸ್ತೆಗೆ ಅಡ್ಡಲಾಗಿ ಕೆಲವು ಕಡೆ ಮರ ಬಿದ್ದಿರುವ ಕಾರಣ ಸಂಚಾರಕ್ಕೆ ಅಡೆತಡೆಯಾಗಿದೆ.