
ಸ್ಯಾನಿಟರಿ ನ್ಯಾಪ್ಕಿನ್, ಆಲ್ಕೋಹಾಲ್ ಹಾಗೂ ಸಿಗರೇಟ್ ನಂತಹ ಬ್ರ್ಯಾಂಡ್ ಗಳ ಜಾಹೀರಾತು ಮಾಡುವುದಿಲ್ಲ ಎಂದು ನಟಿ ಲಾರಾದತ್ತ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಲಾರಾ ಈ ಹೇಳಿಕೆ ನೀಡಿದ್ದು, ನಾವು ಬಳಸದ ವಸ್ತುಗಳನ್ನ ಪ್ರಮೋಟ್ ಮಾಡುವುದು ವೃತ್ತಿ ಧರ್ಮವಲ್ಲ ಎಂದಿದ್ದಾರೆ.
ಮಿಲೇನಿಮ್ ವರ್ಷದಲ್ಲಿ ಭುವನ ಸುಂದರಿ ಪಟ್ಟ ಗೆದ್ದ ಲಾರಾ, ಆನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕೆಲ ವರ್ಷಗಳ ನಂತರ ಸಿನಿಮಾದಲ್ಲೂ ಇನ್ ಆ್ಯಕ್ಟೀವ್ ಆದರೂ ಲಾರಾ, ಜಾಹೀರಾತು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರು. ತಮ್ಮ ಕರಿಯರ್ ನಲ್ಲಿ ಬೈಕ್, ಅಡುಗೆ ಎಣ್ಣೆ, ಟೂತ್ ಪೇಸ್ಟ್ ಸೇರಿದಂತೆ ಹಲವಾರು ಆ್ಯಡ್ ಗಳ ಭಾಗವಾಗಿರುವ ಲಾರಾ ಈಗ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಕ್ಯಾಂಪೇನ್ ಇಂಡಿಯಾದೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಆಲ್ಕೋಹಾಲ್ ಬ್ರ್ಯಾಂಡ್ ಗಳಿಗೆ ಜಾಹೀರಾತು ನೀಡಿಲ್ಲ. ಆ ಪ್ರಾಡಕ್ಟ್ನಿಂದ ನನಗೆ ಯಾವುದೇ ತೊಂದರೆ ಇಲ್ಲ, ಆದರೆ ಅದನ್ನು ಪ್ರಮೋಟ್ ಮಾಡುವ ರೀತಿ ಹಾಗೂ ಕಂಟೆಂಟ್ ನನಗೆ ಇಷ್ಟವಾಗುವುದಿಲ್ಲ. ಸಿಗರೇಟ್ ಗಳನ್ನು ಕೂಡ ನಾನು ಪ್ರಮೋಟ್ ಮಾಡಿಲ್ಲ. ಇತ್ತೀಚೆಗೆ ಸ್ಯಾನಿಟರಿ ನ್ಯಾಪ್ಕಿನ್ ಬ್ರ್ಯಾಂಡ್ ಒಂದು ಅವರ ಜಾಹೀರಾತಿನ ಭಾಗವಾಗಲು ಅಪ್ರೋಚ್ ಮಾಡಿತ್ತು ಆದರೆ ನಾನು ಒಪ್ಪಲಿಲ್ಲ.
ಪ್ರಾಮಾಣಿಕವಾಗಿ ಹೇಳುವುದಾದರೆ ನಾವು ಬಳಸದ ವಸ್ತುಗಳ ಜಾಹೀರಾತು ಮಾಡುವುದು ನನಗೆ ಇಷ್ಟವಿಲ್ಲ. ಇಂತಹ ಉತ್ಪನ್ನಗಳಿಂದ ಪರಿಸರಕ್ಕಾಗುತ್ತಿರುವ ನಷ್ಟ ಹಾಗೂ ತೊಂದರೆ ಬಗ್ಗೆ ನಮಗೆ ತಿಳಿದಿದೆ. ಸ್ಯಾನಿಟರಿ ನ್ಯಾಪ್ಕಿನ್ ಬದಲು, ಮೆನ್ಸ್ಟ್ರುಯಲ್ ಕಪ್ ನಂತಹ ಒಳ್ಳೆಯ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಮುಂದಿನ ದಿನಗಳಲ್ಲಿ ನಾನು ಇಂತಹ ಪರಿಸರ ಸ್ನೇಹಿ ಉತ್ಪನ್ನಗಳನ್ನು ಪ್ರಮೋಟ್ ಮಾಡಲು ಎದುರು ನೋಡುತ್ತೇನೆ ಎಂದಿದ್ದಾರೆ.