
ಪಟನಾದಲ್ಲಿರುವ ಆರ್‌ಜೆಡಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಚಿಹ್ನೆಯಾದ ಲ್ಯಾಂಟರ್ನ್‌ನ (ಲಾಟೀನ್)ಆರು ಟನ್ ತೂಗುವಷ್ಟು ಬೃಹತ್ ಪ್ರತಿಕೃತಿಯೊಂದನ್ನು ಸ್ಥಾಪಿಸಲಾಗುತ್ತಿದೆ.
ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಶೀಘ್ರವೇ ಈ ಪ್ರತಿಕೃತಿಯನ್ನು ಉದ್ಘಾಟಿಸಲಿದ್ದಾರೆ. ಈ ದೈತ್ಯ ಲಾಟೀನ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಬಂಕಾ ಜಿಲ್ಲೆಯ ಖಜಾನೆಯಿಂದ ಅಕ್ರಮವಾಗಿ ಹಣ ಹಿಂಪಡೆದುಕೊಂಡ ಆರೋಪದಲ್ಲಿ ಸಿಬಿಐ ಕೋರ್ಟ್ ಒಂದರ ಮುಂದೆ ಹಾಜರಾಗಲಿರುವ ಲಾಲು ಪ್ರಸಾದ್, ಇದಾದ ಬಳಿಕ ಲ್ಯಾಂಟರ್ನ್ ಪ್ರತಿಕೃತಿಯನ್ನು ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಿಗೇ ಜಾತಿ ಆಧರಿತ ಜನಗಣತಿ ಕುರಿತಂತೆ ಪಕ್ಷದ ಕಾರ್ಯಾಲಯದಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ.
ಜಾತಿ ಆಧರಿತ ಜನಗಣತಿಯ ವಿಚಾರದಲ್ಲಿ ತಮ್ಮ ಪಕ್ಷದ ನಿಲುವು ಬದಲಾಗದು ಎಂದು ಇತ್ತೀಚೆಗೆ ಕೊಟ್ಟ ಸಂದರ್ಶನವೊಂದರ ವೇಳೆ ಲಾಲು ತಿಳಿಸಿದ್ದರು.
ಕೋರ್ಟ್‌ನಲ್ಲಿ ಹಾಜರಾದ ಬಳಿಕ ಎರಡು ದಿನಗಳ ಮಟ್ಟಿಗೆ ಲಾಲು ಪ್ರಸಾದ್ ಅವರು ನಗರದಲ್ಲಿ ಎರಡು ದಿನಗಳ ಕಾಲ ಇರಲಿದ್ದಾರೆ ಎನ್ನಲಾಗಿದೆ. ಲಾಲು ಪುತ್ರ ತೇಜಸ್ವಿ ಯಾದವ್ ಕೋರಿಕೆ ಮೇರೆಗೆ ಲ್ಯಾಂಟರ್ನ್ ಪ್ರತಿಕೃತಿ ನಿರ್ಮಿಸಲಾಗಿದೆ ಎನ್ನಲಾಗಿದೆ.