ನವದೆಹಲಿ: ಸ್ಥಳೀಯ ಭಾಷೆಗಳಲ್ಲಿ ಮಾತ್ರ ಇರುವ ಪಹಣಿ ಭೂ ದಾಖಲೆಗಳನ್ನು ಇಂಗ್ಲಿಷ್, ಹಿಂದಿ ಸೇರಿದಂತೆ 22 ಅಧಿಕೃತ ಭಾಷೆಗಳಲ್ಲಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಇದಕ್ಕಾಗಿ ಸಾಫ್ಟ್ವೇರ್ ಬಿಡುಗಡೆ ಮಾಡಲಾಗುತ್ತದೆ.
ಮೊದಲಿಗೆ ಸ್ಥಳೀಯ ಭಾಷೆ, ಹಿಂದಿ, ಇಂಗ್ಲಿಷ್ ನಲ್ಲಿ ಪಹಣಿ ಲಭ್ಯವಾಗಲಿದ್ದು, ನಂತರ ಇನ್ನು ಮೂರು ಭಾಷೆಗಳಿಗೆ ಪಹಣಿ ದಾಖಲೆಗಳನ್ನು ತರ್ಜುಮೆ ಮಾಡಲಾಗುವುದು. ನಂತರ 22 ಭಾಷೆಗಳಲ್ಲಿ ಪಹಣಿ ದಾಖಲೆ ಲಭ್ಯವಾಗುತ್ತದೆ.
ಬೇರೆ ರಾಜ್ಯದವರು ಭೂ ವ್ಯವಹಾರ ಮಾಡುವಾಗ ಉಂಟಾಗುವ ಭಾಷೆಯ ಗೊಂದಲ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗುವುದು. ರೆಕಾರ್ಡ್ ಆಫ್ ರೈಟ್ಸ್ ಅಥವಾ ಜಮಾ ಬಂದಿ ದಾಖಲೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿದೆ. ಕರ್ನಾಟಕದಲ್ಲಿ ಭೂಮಿ ವೆಬ್ಸೈಟ್ ನಲ್ಲಿ ಪಹಣಿ ಕನ್ನಡ ಭಾಷೆಯಲ್ಲಿ ಲಭ್ಯವಿದ್ದು, ಬೇರೆ ರಾಜ್ಯಗಳಲ್ಲಿ ಭಾಷೆ ಭಾಷೆಗಳಲ್ಲಿ ಲಭ್ಯವಿದೆ. ದೇಶದ ಎಲ್ಲ 22 ಅಧಿಕೃತ ಭಾಷೆಗಳಿಗೂ ಈ ದಾಖಲೆ ಭಾಷಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.