ಮನಿಲಾ : ದಕ್ಷಿಣ ಫಿಲಿಪೈನ್ಸ್ ನ ದಾವಾವೊ ಡಿ ಒರೊ ಪ್ರಾಂತ್ಯದ ಹಳ್ಳಿಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, 110 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮಾಕೊ ಪಟ್ಟಣದ ಗಣಿಗಾರಿಕೆ ಸ್ಥಳದ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಭೂಕುಸಿತದಿಂದ 31 ಜನರನ್ನು ರಕ್ಷಿಸಲಾಗಿದೆ ಎಂದು ಮಾಕೊ ಪುರಸಭೆ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.ಕನಿಷ್ಠ 110 ಜನರು ಕಾಣೆಯಾಗಿದ್ದಾರೆ ಎಂದು ಇತ್ತೀಚಿನ ವರದಿ ಹೇಳಿದೆ.
ಭೀಕರ ಭೂಕುಸಿತದ ಎರಡು ದಿನಗಳ ನಂತರ ಮೂರು ವರ್ಷದ ಬಾಲಕಿ ಮತ್ತು ಎರಡು ತಿಂಗಳ ಗಂಡು ಮಗುವನ್ನು ಮಣ್ಣಿನಿಂದ ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಫಿಲಿಪೈನ್ಸ್ ರೆಡ್ ಕ್ರಾಸ್ ಶುಕ್ರವಾರ ವರದಿ ಮಾಡಿದೆ.ಪರ್ವತದಿಂದ ಉರುಳಿದ ಟನ್ ಗಟ್ಟಲೆ ಮಣ್ಣು, ಬಂಡೆಗಳು ಮತ್ತು ಮರಗಳ ಅಡಿಯಲ್ಲಿ ಹೂತುಹೋದ ಕಾಣೆಯಾದ ಜನರನ್ನು ಹುಡುಕಲು ಶೋಧ ಕಾರ್ಯಾಚರಣೆ ಮುಂದುವರೆದಿದೆ.