ಶುಕ್ರವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಜಮ್ಮು-ಶ್ರೀನಗರ ಹೆದ್ದಾರಿ ಬಂದ್ ಆಗಿದೆ. ಹೆದ್ದಾರಿ ಮುಚ್ಚಿರುವುದರಿಂದ ಸರಿಸುಮಾರು 3,000 ವಾಹನಗಳು ಜುಮ್ಮು-ಶ್ರೀನಗರದಲ್ಲಿ ಸಿಲುಕಿಕೊಂಡಿವೆ ಎಂದು ಸಂಚಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಡೆಬಿಡದೆ ಕಾಡುತ್ತಿರುವ ಮಳೆಯಿಂದ ತೊಂದರೆಯಗಬಹುದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ, ಶುಕ್ರವಾರ ಶ್ರೀನಗರದಿಂದ ಜಮ್ಮುವಿಗೆ 1,000 ಕ್ಕೂ ಹೆಚ್ಚು ವಾಹನಗಳನ್ನು ಸಾಗಿಸಲಾಯಿತು. ನಂತರ ರಾಂಬನ್ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಭೂಕುಸಿತವಾಗಿದೆ ಮತ್ತು ಬೃಹತ್ ಗಾತ್ರದ ಕಲ್ಲುಗಳು ಬಿದ್ದಿರುವುದರಿಂದ ಹೆದ್ದಾರಿಯನ್ನ ಮುಚ್ಚಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಧಂಪುರ, ರಾಂಬನ್ ಜಿಲ್ಲೆ ಸೇರಿದಂತೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಸಂದರ್ಭದಲ್ಲಿ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಹೆದ್ದಾರಿಯಲ್ಲಿ ಸಿಲುಕಿರುವ ಎಲ್ಲಾ ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಲಾಗಿದೆ, ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಎಡೆಬಿಡದ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಉಂಟಾಗಿರುವುದು ಇಡೀ ಹೆದ್ದಾರಿಯನ್ನೆ ಬಂದ್ ಮಾಡಿದೆ. ಈ ಹೆದ್ದಾರಿಯಿಂದ ಕಾಶ್ಮೀರದ ಹಲವು ಪ್ರದೇಶಗಳಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡಲಾಗ್ತಿತ್ತು. ಈಗ ಈ ಪ್ರಮುಖ ಮಾರ್ಗ ಕ್ಲೋಸ್ ಆಗಿರುವುದರಿಂದ ಕಾಶ್ಮೀರ ಕಣಿವೆಯಲ್ಲಿ ವಸ್ತುಗಳ ಸಂಗ್ರಹಣೆ ಹಾಗೂ ಕಳ್ಳ ವ್ಯಾಪಾರಿಗಳ ಹಾವಳಿ ಶುರುವಾಗುತ್ತದೆ.