ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಮಳೆಯ ಅಬ್ಬರ ಪ್ರವಾಹ, ಭೂ ಕುಸಿತ ಸಂಭವಿಸುತ್ತಿದ್ದರೆ ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯನವರಿಗೆ ಮುಡಾ ಹಗರಣ ಕಗ್ಗಂಟಾಗಿ ಪರಿಣಮಿಸಿದ್ದು, ಕುರ್ಚಿ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಉಪಹಾರ ಕೂಟ ಆಯೋಜಿಸಿ ಮುಂದಿನ ನಡೆ, ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದರು. ಇದೇ ವಿಚಾರವಾಗಿ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ಸಾಲು ಸಾಲು ಭೂ ಕುಸಿತ ಸಂಭವಿಸಿದ್ದು, ಇಂದು ಮತ್ತೆ ಭೂ ಕುಸಿತದಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ರಾಜ್ಯದಲ್ಲಿನ ಭೂ ಕುಸಿತ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಕುರ್ಚಿ ಉಳಿಸಿಕೊಳ್ಳುವ ಯೋಚನೆ ವಿಚಾರ ಹೋಲಿಕೆ ಮಾಡಿ ಬಿಜೆಪಿ ಟಾಂಗ್ ನೀಡಿದೆ. ಸಿದ್ದರಾಮಯ್ಯನವರಿಗೆ ಭೂ ಕುಸಿತಕ್ಕಿಂತ ಕುರ್ಚಿ ಕುಸಿತದ ಬಗ್ಗೆ ಹೆಚ್ಚು ಚಿಂತೆ!! ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.