ಬೆಂಗಳೂರು: ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲು ಸರ್ಕಾರ ಮುಂದಾಗಿದ್ದು, ಫಲಾನುಭವಿಗಳ ಆಯ್ಕೆಗೆ ಕ್ರಮ ಕೈಗೊಂಡಿದೆ.
ವಿದ್ಯಾನಿಧಿ ಯೋಜನೆ ಅನ್ವಯ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ, ಪಿಯುಸಿ, ಐಟಿಐ, ಪದವಿ ಸೇರಿದಂತೆ ಉನ್ನತ ಪದವಿಯಲ್ಲಿ ಓದುತ್ತಿರುವ ಕೃಷಿ ಭೂಮಿ ಹೊಂದಿದ ಕೃಷಿಕರ ಮಕ್ಕಳಿಗೆ 2000 ರೂ.ನಿಂದ 11,000 ರೂ. ವರೆಗೆ ನೆರವು ನೀಡಲಾಗುತ್ತಿದೆ.
ಇದೇ ರೀತಿ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆಯ್ಕೆಗೆ ಕ್ರಮ ಕೈಗೊಳ್ಳಲಾಗಿದೆ. ಜನವರಿಯಲ್ಲಿ ಮೊದಲ ಹಂತದಲ್ಲಿ 2 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲು ಕೃಷಿ ಇಲಾಖೆ ಪ್ರಕ್ರಿಯೆ ಕೈಗೊಂಡಿದೆ.
ಅರ್ಜಿ ಸ್ವೀಕರಿಸದೆ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಮಾಡುವ ರೈತ ವಿದ್ಯಾನಿಧಿ ಮಾದರಿಯಲ್ಲಿ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.